ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧವು ಧಾರ್ಮಿಕ ಸಂಪ್ರದಾಯ ಮತ್ತು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದ್ದು, ಅದು ಲಿಂಗ ತಾರತಮ್ಯವಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಸ್ಪಷ್ಟಪಡಿಸಿದೆ.
2018ರಲ್ಲಿ ಸುಪ್ರೀಂ ಕೋರ್ಟ್ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಪ್ರವೇಶ ಅನುಮತಿ ನೀಡಿದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು ತನ್ನ ಅಧಿಕೃತ ನಿಲುವನ್ನು ಲಿಖಿತ ರೂಪದಲ್ಲಿ ಸಲ್ಲಿಸಿದೆ.
ಶಬರಿಮಲೆಯಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವು ಅಯ್ಯಪ್ಪ ಸ್ವಾಮಿಯ ನೈಷ್ಠಿಕ ಬ್ರಹ್ಮಚರ್ಯೆಗೆ ಸಂಬಂಧಿಸಿದಂತೆ ರೂಢಿಗೆ ಬಂದಿರುವುದು. ಮಹಿಳೆಯರನ್ನು ಕೀಳಾಗಿ ಕಾಣುವ ವ್ಯವಸ್ಥೆ ಎಂದು ಭಾವಿಸುವುದಲ್ಲ. ಮಹಿಳೆಯರಿಗೆ ಪ್ರವೇಶ ನೀಡಿದರೆ ದೇವಸ್ಥಾನದ ಪೂಜಾ ಪದ್ಧತಿ ಮತ್ತು ಸಂಪ್ರದಾಯದ ಸ್ವರೂಪವೇ ಬದಲಾಗುತ್ತದೆ. ಇದು ಸಂವಿಧಾನವು ರಕ್ಷಿಸುವ ಧಾರ್ಮಿಕ ವೈವಿಧ್ಯತೆಯನ್ನು ದುರ್ಬಲಗೊಳಿಸುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ವಿವರಿಸಿದರು.
ಶತಮಾನಗಳಿಂದ ಭಕ್ತರು ಈ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ಇದು ಧಾರ್ಮಿಕ ನಂಬಿಕೆ ಮತ್ತು ಪಂಗಡದ ಸ್ವಾಯತ್ತತೆಗೆ ಸಂಬಂಧಿಸಿದ ವಿಷಯವಾಗಿದೆ. ಇದನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸುವುದು ಸರಿಯಲ್ಲ ಎಂದು ಕೇಂದ್ರ ಹೇಳಿದೆ.


