ಬೆಂಗಳೂರು: ಸಹಸ್ರಾರು ಮರಗಳನ್ನು ನೆಟ್ಟು ಪರಿಸರ ಕಾಳಜಿ ತೋರಿ ಮಾದರಿಯಾಗಿದ್ದ ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ನೇರವೇರಿತು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯ ಕಲಾಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಾಹಿತಿ ಸಿದ್ದಲಿಂಗಯ್ಯ ಅವರ ಸಮಾಧಿ ಪಕ್ಕದಲ್ಲಿ ಸಾಲುಮರದ ತಿಮ್ಮಕ್ಕನ ಅಂತ್ಯಕ್ರಿಯೆ ನೆರವೇರಿತು.
ಅಂತ್ಯಕ್ರಿಯೆ ವೇಳೆ ಮೂರು ಬಾರಿ ಕುಶಾಲು ತೋಪು ಸಿಡಿಸಿ ಸರ್ಕಾರಿ ಗೌರವ ಅರ್ಪಿಸಲಾಯಿತು. ಈ ವೇಳೆ ಗೃಹ ಸಚಿವ ಜಿ.ಪರಮೇಶ್ವರ್ ತ್ರಿವರ್ಣ ಧ್ವಜವನ್ನು ಪುತ್ರ ಉಮೇಶ್ ಗೆ ಹಸ್ತಾಂತರಿಸಿದರು.
ಅತ್ಯಂತ ಕಡುಬಡತನದ ನಡುವೆಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ತಿಮ್ಮಕ್ಕ ಸಾಲು ಸಾಲು ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಪರಿಸರ ಕಾಳಜಿ ಮೆರೆದಿದ್ದರು. ಅವರ ಈ ಸೇವೆಗಾಗಿ ಪದ್ಮಶ್ರೀ, ನಾಡೋಜ ಸೇರಿದಂತೆ ಹಲವು ಪ್ರಶಸ್ತಿಗಳು ಹರಿದು ಬಂದಿದ್ದವು.


