ಚೆನ್ನೈ: ಆರಂಭಿಕ ಕೆಎಲ್ ರಾಹುಲ್ ಆಡಿದ ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವು ತಂದುಕೊಟ್ಟರೆ, ಐಪಿಎಲ್ ಟಿ-20 ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 25 ರನ್ ಗಳ ಸೋಲುಂಡಿದೆ.
ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 183 ರನ್ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಗಳಿಸಲಷ್ಟೇ ಶಕ್ತವಾಯಿತು.
ಡೆಲ್ಲಿ ಕ್ಯಾಪಿಟಲ್ಸ್ ಹ್ಯಾಟ್ರಿಕ್ ಗೆಲುವಿನೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಚೆನ್ನೈ ಸೂಪರ್ ಕಿಂಗ್ಸ್ 4 ಪಂದ್ಯಗಳಲ್ಲಿ 1 ಜಯ ಹಾಗೂ 3 ಸೋಲಿನೊಂದಿಗೆ 2 ಅಂಕ ಸಂಪಾದಿಸಿ 8ನೇ ಸ್ಥಾನಕ್ಕೆ ಕುಸಿಯಿತು.
ಸ್ಪಿನ್ನರ್ ಗಳಿಗೆ ನೆರವಾಗುವ ತವರಿನ ಪಿಚ್ ನಲ್ಲಿ ರನ್ ಗಳಿಸಲು ಪರದಾಟ ನಡೆಸಿದ ಚೆನ್ನೈ 74 ರನ್ ಗೆ 5 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. 6ನೇ ಕ್ರಮಾಂಕದಲ್ಲಿ ಆಡಲಿಳಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ವಿಜಯ ಶಂಕರ್ ಮುರಿಯದ 6ನೇ ವಿಕೆಟ್ ಗೆ 84 ರನ್ ಜೊತೆಯಾಟ ನಿಭಾಯಿಸಿದರೂ ಯಾವುದೇ ಹಂತದಲ್ಲೂ ಗೆಲುವಿನ ಸೂಚನೆ ನೀಡಲಿಲ್ಲ.
ವಿಜಯ್ ಶಂಕರ್ 54 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 69 ರನ್ ಬಾರಿಸಿದರೆ, ಧೋನಿ 26 ಎಸೆತಗಳಲ್ಲಿ ತಲಾ 1 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 30 ರನ್ ಬಾರಿಸಿ ಔಟಾಗದೇ ಉಳಿದರು.
ಡೆಲ್ಲಿಗೆ ರಾಹುಲ್ ಆಸರೆ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಖಾತೆ ತೆರೆಯುವ ಮುನ್ನವೇ ಜಾಕ್ ಫ್ರೇಜರ್ ವಿಕೆಟ್ ಕಳೆದುಕೊಂಡಿತು. ಆದರೆ ವೈಯಕ್ತಿಕ ಕಾರಣದಿಂದ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಮತ್ತು ಅಭಿಷೇಕ್ ಪೊರಲ್ (34) ಎರಡನೇ ವಿಕೆಟ್ ಗೆ 54 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿತು.
ರಾಹುಲ್ 51 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 77 ರನ್ ಬಾರಿಸಿ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರೆ, ನಾಯಕ ಅಕ್ಸರ್ ಪಟೇಲ್ (21), ಸಮೀರ್ ರಿಜ್ವಿ (20) ಮತ್ತು ಟಿಟ್ಸನ್ ಸ್ಟಬ್ಸ್ (24 ರನ್ 12 ಎಸೆತ, 2 ಬೌಂಡರಿ, 1 ಸಿಕ್ಸರ್) ಉಪಯುಕ್ತ ಕಾಣಿಕೆ ನೀಡಿದರು.