ಚೀನಾದ ಗಡಿಯಲ್ಲಿ ನಾಪತ್ತೆಯಾಗಿದ್ದ ರಷ್ಯಾ ವಿಮಾನ ಪತನಗೊಂಡಿದ್ದು ದೃಢಪಟ್ಟಿದ್ದು, ವಿಮಾನದಲ್ಲಿದ್ದ ಎಲ್ಲಾ 43 ಮಂದಿ ಮೃತಪಟ್ಟಿದ್ದಾರೆ.
ಆಂಟೊನೊವ್ -24 (An-24) ಪ್ರಯಾಣಿಕ ವಿಮಾನದ ಅವಶೇಷಗಳು ಅಮುರ್ ಪ್ರದೇಶದ ಟಿಂಡಾ ಪಟ್ಟಣದ ಬಳಿ ಪತ್ತೆಯಾಗಿವೆ ಎಂದು ರಷ್ಯಾದ ತುರ್ತು ಸೇವೆಗಳು ದೃಢಪಡಿಸಿವೆ.
ಟಿಂಡಾದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ, ಇಳಿಜಾರಿನಲ್ಲಿ ಆನ್ -24 ವಿಮಾನದ ಅವಶೇಷಗಳು ಕಂಡುಬಂದಿದ್ದು, ವಿಮಾನ ಸಂಪೂರ್ಣವಾಗಿ ನಾಶವಾಗಿದೆ.
ಅಂಗಾರ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಈ ವಿಮಾನದಲ್ಲಿ 5 ಮಕ್ಕಳು ಹಾಗೂ 6 ಮಂದಿ ಸಿಬ್ಬಂದಿ ಸೇರಿದಂತೆ 43 ಮಂದಿ ಇದ್ದರು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ಖಬರೋವ್ಸ್ಕ್‌ನಿಂದ ಹೊರಟ ವಿಮಾನ ಖಬರೋವ್ಸ್ಕ್-ಬ್ಲಾಗೊವೆಶ್‌ಚೆನ್ಸ್ಕ್-ಟಿಂಡಾ ಮಾರ್ಗವಾಗಿ ಪ್ರಯಾಣಿಸುತ್ತಿತ್ತು.
ಮಾಸ್ಕೋದಿಂದ ಸುಮಾರು 6,600 ಕಿ.ಮೀ ಪೂರ್ವದಲ್ಲಿರು ಟಿಂಡಾದಲ್ಲ ಬೆಳಿಗ್ಗೆ ವಿಮಾನ ಸಂಪರ್ಕ ಕಡಿತಗೊಂಡಿತ್ತು. ಈ ಪ್ರದೇಶದಲ್ಲಿ ಇಂತಹ ಘಟನೆ ಇದೇ ಮೊದಲಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಈಶಾನ್ಯ ಅಮುರ್ ಪ್ರದೇಶದ ಝೆಯಾ ಜಿಲ್ಲೆಯಲ್ಲಿ ಮೂರು ಜನರನ್ನು ಹೊತ್ತೊಯ್ಯುತ್ತಿದ್ದ ರಾಬಿನ್ಸನ್ R66 ಹೆಲಿಕಾಪ್ಟರ್ ಕಾಣೆಯಾಗಿತ್ತು.
ಸೋಮವಾರ, ಮೆಕ್ಸಿಕೋ ನಗರದಲ್ಲಿ ರನ್‌ವೇಯಲ್ಲಿ ಏರೋಮೆಕ್ಸಿಕೊ ಪ್ರಾದೇಶಿಕ ಜೆಟ್ ವಿಮಾನವು ಡೆಲ್ಟಾ ಏರ್ ಲೈನ್ಸ್ ಬೋಯಿಂಗ್ 737 ಜೆಟ್‌ಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ಏರೋಮೆಕ್ಸಿಕೊ ವಿಮಾನವು ಲ್ಯಾಂಡಿಂಗ್‌ಗೆ ಬರುತ್ತಿದ್ದಾಗ, ಆಗಲೇ ಟೇಕ್ ಆಫ್ ಆಗಲು ಸಿದ್ಧವಾಗುತ್ತಿದ್ದ ಡೆಲ್ಟಾ ಏರ್ ಲೈನ್ಸ್ ಬೋಯಿಂಗ್ 737 ಜೆಟ್‌ನ ಮುಂದೆ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ.