ಉಕ್ರೇನ್ನ ಡ್ನಿಪ್ರೊ ಪ್ರದೇಶದಲ್ಲಿ ಗಣಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಬಸ್ಗೆ ರಷ್ಯಾ ಡ್ರೋನ್ ದಾಳಿ ನಡೆಸಿ ಕನಿಷ್ಠ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ಡ್ರೋನ್ ದಾಳಿಗಳು ಭಯಾನಕವಾಗಿ ಮುಂದುವರಿದಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಉಕ್ರೇನ್ನ ಜಪೋರಿಝಿಯಾ ನಗರದ ಹೆರಿಗೆ ಆಸ್ಪತ್ರೆಯ ಮೇಲೂ ರಷ್ಯಾ ಡ್ರೋನ್ ದಾಳಿಗೆ 9 ಮಂದಿ ಗಾಯಗೊಂಡಿದ್ದಾರೆ.
ಉಕ್ರೇನ್ನ ಅತಿದೊಡ್ಡ ಖಾಸಗಿ ಇಂಧನ ಕಂಪನಿಯ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಶಿಫ್ಟ್ ಮುಗಿದ ನಂತರ ಸಾಗಿಸುತ್ತಿದ್ದ ಬಸ್ಗೆ ರಷ್ಯಾ ಡ್ರೋನ್ ದಾಳಿ ನಡೆಸಿದೆ. ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಉಕ್ರೇನ್ ಇಂಧನ ಸಚಿವ ಡೆನಿಸ್ ಶ್ಮಿಹಾಲ್ ಇದನ್ನು “ಇಂಧನ ವಲಯದ ಕಾರ್ಮಿಕರ ಮೇಲಿನ ಸಿನಿಕತೆಯಿಂದ ಕೂಡಿದ ಗುರಿ ಕೇಂದ್ರಿತ ದಾಳಿ ಎಂದು ಖಂಡಿಸಿದ್ದಾರೆ.
ರಷ್ಯಾ ಡ್ರೋನ್ಗಳು ಜಪೋರಿಝಿಯಾ ನಗರದ ಹೆರಿಗೆ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದರಿಂದ ಸ್ತ್ರೀರೋಗ ವಿಭಾಗದದಲ್ಲಿ ಬೆಂಕಿ ಕಾಣಿಸಿಕೊಂಡಿತು, ತುರ್ತು ಸೇವಾ ತಂಡ ತಕ್ಷಣ ಶಮನ ಗೊಳಿಸಿವೆ, ಕೆಲವರು ಗಾಯಗೊಂಡಿದ್ದಾರೆಂದು ಪ್ರಾದೇಶಿಕ ಆಡಳಿತ ಮುಖ್ಯಸ್ಥ ಇವಾನ್ ಫೆಡೋರೊವ್ ತಿಳಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮುಂದಿನ ತ್ರಿಪಕ್ಷೀಯ ಶಾಂತಿ ಮಾತುಕತೆಗಳನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ ಈ ದಾಳಿಗಳು ನಡೆದಿವೆ. ಅಮೆರಿಕ, ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳು ಫೆಬ್ರವರಿ 4 ಮತ್ತು 5ರಂದು ಅಬುಧಾಬಿಯಲ್ಲಿ ಭೇಟಿಯಾಗಲಿದ್ದಾರೆ ಎಂದು ಝೆಲೆನ್ಸ್ಕಿ ಈಗಾಗಲೇ ತಿಳಿಸಿದ್ದಾರೆ. ಉಕ್ರೇನ್ ಮಾತುಕತೆಗಳಿಗೆ ಸಿದ್ಧವಾಗಿ ಯುದ್ಧಕ್ಕೆ ನಿಜವಾದ ಅಂತ್ಯ ಹಾಡಲು ಆಸಕ್ತಿ ಹೊಂದಿದೆ ಎಂದು ಅವರು ಹೇಳಿದ್ದಾರೆ.


