ರಷ್ಯಾದ ತೈಲ ಕಂಪನಿಗಳ ಮೇಲಿನ ಅಮೆರಿಕದ ನಿರ್ಬಂಧಗಳ ಕುರಿತು ಪ್ರತಿಕ್ರಿಯಿಸಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಮೆರಿಕ ಅಥವಾ ಯಾವುದೇ ಇತರ ದೇಶದ ಒತ್ತಡಕ್ಕೆ ರಷ್ಯಾ ಎಂದಿಗೂ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಷ್ಯಾದ ಗಡಿಯೊಳಗೆ ದಾಳಿ ನಡೆಸಿದರೆ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಪುಟಿನ್ ಎಚ್ಚರಿಸಿದ್ದು, ಅಮೆರಿಕದ ಈ ನಿರ್ಧಾರ ರಷ್ಯಾ- ಅಮೆರಿಕ ಸಂಬಂಧಗಳನ್ನು ಬಲಪಡಿಸುವುದಿಲ್ಲ ಎಂದು ಹೇಳಿದ್ದಾರೆ. ಯಾವುದೇ ಸ್ವಾಭಿಮಾನಿ ದೇಶ ಅಥವಾ ಸ್ವಾಭಿಮಾನಿ ಜನರು ಒತ್ತಡದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಅಮೆರಿಕ ವಿಧಿಸಿರುವ ನಿರ್ಬಂಧಗಳು ಕೆಲವೊಂದು ಪರಿಣಾಮ ಬೀರುತ್ತವೆಯಾದರೂ, ರಷ್ಯಾದ ಆರ್ಥಿಕ ಪರಿಸ್ಥಿತಿಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ ಎಂದು ಪುಟಿನ್ ಹೇಳಿದ್ದಾರೆ.
ರಷ್ಯಾದ ಇಂಧನ ವಲಯವು ಆತ್ಮವಿಶ್ವಾಸದಿಂದ ಕೂಡಿದ್ದು, ಸದೃಢವಾಗಿದೆ. ಜಾಗತಿಕ ಇಂಧನ ಸಮತೋಲನ ಹದಗೆಟ್ಟರೆ ತೈಲ ಬೆಲೆಗಳು ಏರಿಕೆಯಾಗುತ್ತವೆ, ಇದು ಅಮೆರಿಕದಂಥ ದೇಶಗಳಿಗೆ ಅನನುಕೂಲವಾಗುತ್ತದೆ ಎಂದಿದ್ದಾರೆ.
ಉಕ್ರೇನ್ ಅಮೆರಿಕದಿಂದ ಪಡೆದುಕೊಂಡ ದೀರ್ಘ-ಶ್ರೇಣಿಯ ಟೊಮಾಹಾಕ್ ಕ್ಷಿಪಣಿಗಳನ್ನು ಬಳಸಿದೆ ಎಂಬ ವರದಿಗಳ ವಿರುದ್ಧ ಪುಟಿನ್ ಕಠಿಣ ಎಚ್ಚರಿಕೆ ನೀಡಿದರು. ಇವು 3,000 ಕಿಲೋಮೀಟರ್ ದೂರದ ಗುರಿ ಹೊಡೆಯಬಲ್ಲವು. ಇದು ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಪ್ರಯತ್ನ. ಆದರೆ ಅಂತಹ ಶಸ್ತ್ರಾಸ್ತ್ರಗಳನ್ನು ರಷ್ಯಾದ ಪ್ರದೇಶದ ಮೇಲೆ ದಾಳಿ ಮಾಡಲು ಬಳಸಿದರೆ ಪ್ರತಿಕ್ರಿಯೆ ತುಂಬಾ ಗಂಭೀರವಾಗಿರುತ್ತದೆ ಎಂದು ಹೇಳಿದ್ದಾರೆ.
ರಷ್ಯಾದ ಯುದ್ಧ ನಿಧಿಯನ್ನು ತಡೆಯುವ ಮತ್ತು ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ಒತ್ತಡ ಹೇರುವ ಉದ್ದೇಶದಿಂದ ರಷ್ಯಾದ ಎರಡು ದೊಡ್ಡ ತೈಲ ಕಂಪನಿಗಳಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ. ಟ್ರಂಪ್ ರಷ್ಯಾದ ತೈಲವನ್ನು ಖರೀದಿಸುವ ದೇಶಗಳನ್ನು, ವಿಶೇಷವಾಗಿ ಚೀನಾ ಮತ್ತು ಭಾರತವನ್ನು ಗುರಿಯಾಗಿಸಿಕೊಂಡಿದ್ದಾರೆ. ಇವೆರಡೂ ರಷ್ಯಾದ ಕಚ್ಚಾ ತೈಲದ ಅತಿದೊಡ್ಡ ಖರೀದಿದಾರರು. ಈಗಾಗಲೇ ಅಧಿಕವಾಗಿರುವ ಶೇ.155 ತೆರಿಗೆಯ ಜೊತೆಗೆ ಟ್ರಂಪ್ ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.100, ಭಾರತದ ಮೇಲೂ ಭಾರಿ ಶೇ.50 ತೆರಿಗೆ ವಿಧಿಸಿದ್ದಾರೆ.
ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ಟ್ರಂಪ್ ಚೀನಾ, ಭಾರತಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಚೀನಾ ಪ್ರತೀಕಾರದ ಬೆದರಿಕೆ ಹಾಕಿದ್ದರೆ, ಭಾರತ ರಷ್ಯಾದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.


