Thursday, November 27, 2025
Menu

ಕೋಲಾರದಲ್ಲಿ ಆರ್‌ಟಿಒದಿಂದ ಖಾಸಗಿ ಬಸ್‌ಗಳ ಸೀಜ್‌, ಕೋಟಿಗೂ ಅಧಿಕ ದಂಡ ವಸೂಲಿ

ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಅಂತಾರಾಜ್ಯ ಖಾಸಗಿ ಬಸ್‌ಗಳನ್ನು ಕೋಲಾರದಲ್ಲಿ ತಪಾಸಣೆ ನಡೆಸಿ ನಿಯಮ ಉಲ್ಲಂಘಿಸಿರುವ ಬಸ್‌ಗಳನ್ನು ಸೀಜ್‌ ಮಾಡಿದ್ದು, ಒಂದು ಕೋಟಿ ರೂ.ಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಆಂಧ್ರ, ತಮಿಳುನಾಡು ಸೇರಿ ನಾನಾ ರಾಜ್ಯಗಳಿಗೆ ಸಂಚರಿಸುತ್ತಿದ್ದ ಹಲವು ಖಾಸಗಿ ಟ್ರಾವೆಲ್ಸ್‌ಗಳ 32 ಖಾಸಗಿ ಬಸ್​ಗಳನ್ನು ಸೀಜ್ ಮಾಡಿದ್ದಾರೆ. ರಾಜ್ಯದ ತೆರಿಗೆ ಪಾವತಿಸದಿರುವುದು, ಸುರಕ್ಷತಾ ಸಾಧನಗಳ ಕೊರತೆ, ಎಫ್‌ಸಿ ಇಲ್ಲದಿರುವುದು, ತುರ್ತು ನಿರ್ಗಮ ದ್ವಾರಗಳು ಇಲ್ಲದಿರುವುದು, ಪರವಾನಗಿ ಇಲ್ಲದಿರುವುದು, ನಿಯಮ ಉಲ್ಲಂಘಿಸಿರುವುದು ದಾಳಿ ವೇಳೆ ಕಂಡು ಬಂದಿದೆ.

ಜಂಟಿ ಸಾರಿಗೆ ಆಯುಕ್ತರಾದ ಗಾಯತ್ರಿದೇವಿ ನೇತೃತ್ವದಲ್ಲಿ 15 ಅಧಿಕಾರಿಗಳ 4 ತಂಡ ನಿಯಮ ಉಲ್ಲಂಘಿಸಿದವರಿಂದ 1 ಕೋಟಿ ರೂ.ಗೂ ಹೆಚ್ಚಿನ ದಂಡ ವಸೂಲಿ ಮಾಡಿದ್ದಾರೆ. ಖಾಸಗಿ ಬಸ್‌ಗಳ ಪರಿಶೀಲನೆ ವೇಳೆ ಸಾಕಷ್ಟು ಲೋಪಗಳು ಕಂಡು ಬಂದಿವೆ. ಆದರೆ ಅಧಿಕಾರಿಗಳ ದಾಳಿಗೆ ಖಾಸಗಿ ಟ್ರಾವೆಲ್ಸ್‌ ಕಿಡಿಕಾರಿದ್ದು, ದಾಳಿ ಪ್ರಶ್ನಿಸಿ ಕೋರ್ಟ್‌ ಮೊರೆ ಹೋಗುವುದಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್‌ಗಳನ್ನು ಈಶಾನ್ಯ ರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡು ಕರ್ನಾಟಕದಲ್ಲಿ ಅಕ್ರಮವಾಗಿ ಸಂಚರಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಸೇರಬೇಕಾದ ತೆರಿಗೆ ವಂಚಿಸುತ್ತಿರುವುದು ಆರ್‌ಟಿಒ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ.
ವಶಪಡಿಸಿಕೊಳ್ಳಲಾದ ಬಸ್‌ಗಳಲ್ಲಿ ಬಹುತೇಕ ನಾಗಾಲ್ಯಾಂಡ್ ಅರುಣಾಚಲ ಪ್ರದೇಶ ಸೇರಿದಂತೆ ಈಶಾನ್ಯ ರಾಜ್ಯಗಳ ನೋಂದಣಿ ಸಂಖ್ಯೆಯನ್ನು ಹೊಂದಿವೆ. ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್’ ಅಡಿ ಸಂಚರಿಸುತ್ತಿದ್ದರೂ ಕರ್ನಾಟಕದದಲ್ಲಿ ಪಾವತಿಸಬೇಕಾದ ಪ್ರವೇಶ ತೆರಿಗೆ ಪಾವತಿಸಿಲ್ಲ ಎಂಬುದು ತಿಳಿದು ಬಂದಿದೆ.

ಒಂದೇ ನೋಂದಣಿ ಸಂಖ್ಯೆಯನ್ನು ಎರಡು ಬಸ್‌ಗಳಿಗೆ ಬಳಸಿ ವಂಚಿಸುತ್ತಿದ್ದ ಪ್ರಕರಣವನ್ನೂ ಬಯಲಿಗೆಳೆಯಲಾಗಿದೆ. ವಶಪಡಿಸಿಕೊಂಡ ಬಸ್‌ಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಬಾಕಿ ಇರುವ ತೆರಿಗೆ ಮತ್ತು ದಂಡವನ್ನು ಪಾವತಿಸಿದ ನಂತರ ಬಸ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಅಕ್ರಮ ಬಸ್‌ಗಳ ಸಂಚಾರದಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ವಾರ್ಷಿಕವಾಗಿ 500 ರಿಂದ 1000 ಕೋಟಿ ರೂಪಾಯ ತೆರಿಗೆ ನಷ್ಟವಾಗುತ್ತಿದೆ. ಕಳೆದ ವಾರವಷ್ಟೇ ಚಿಕ್ಕಬಳ್ಳಾಪುರ ಬಳಿ 10ಕ್ಕೂ ಹೆಚ್ಚು ಐಷಾರಾಮಿ ಬಸ್‌ಗಳನ್ನು ಜಪ್ತಿ ಮಾಡಲಾಗಿತ್ತು ಅಕ್ಟೋಬರ್ ತಿಂಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಬಸ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು.

Related Posts

Leave a Reply

Your email address will not be published. Required fields are marked *