ಚಲನಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಷರೀಫ್ ನಿವಾಸಕ್ಕೆ ಸಾರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಅವರ ಬಳಿ ಇರುವ ಐಷಾರಾಮಿ ಕಾರುಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ಕೆಜಿಎಫ್ ಬಾಬು ಬಳಿ ರೋಲ್ಸ್ ರಾಯ್ಸ್, ವೆಲ್ಪೇರ್ ಸೇರಿದಂತೆ ಇನ್ನೂ ಹಲವು ದುಬಾರಿ ಕಾರುಗಳಿವೆ. ಕೆಲವು ಕಾರುಗಳ ರಸ್ತೆ ತೆರಿಗೆ ಪಾವತಿ ಮಾಡಿಲ್ಲ ಎಂಬ ಮಾಹಿತಿ ಆಧಾರದ ಮೇಲೆ ಆರ್‌ಟಿಒ ಜಂಟಿ ಆಯುಕ್ತರಾದ ಶೋಭಾ ಅವರ ನೇತೃತ್ವದ ತಂಡ ಮನೆಗೆ ದಾಳಿ ನಡೆಸಿದೆ. ಅಧಿಕಾರಿಗಳ ತಂಡ ಬಂದಾಗ ಕೆಜಿಎಫ್ ಬಾಬು ನಿವಾಸದ ಗೇಟ್ ತೆರೆಯದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೈಗ್ರೌಂಡ್ ಹೊಯ್ಸಳ ಪೊಲೀಸರ ಸಹಾಯವನ್ನು ಕೋರಿ ನಂತರ ಗೇಟ್ ತೆರೆಯಲಾಗಿದೆ.
ಎರಡು ರೋಲ್ಸ್ ರಾಯ್ ಕಾರು ಬಾಬು ಬಳಿ ಇದ್ದು, ಮೊಮ್ಮಗಳಿಗಾಗಿ ವೇಲ್ಪೇರ್ ಕಾರ್ ಖರೀದಿ ಮಾಡಿದ್ದರು. ಅಮಿತಾಬಚ್ಚನ್ ಹಾಗೂ ಅಮೀರ್ ಖಾನ್ ನಿಂದ ಈ ಕಾರು ಖರೀದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಟ್ಯಾಕ್ಸ್ ಕಟ್ಟಿಲ್ಲ ಎಂದು ತಿಳಿದುಬಂದಿದೆ. ಮನೆಯ ಪಾರ್ಕಿಂಗ್ ನಲ್ಲಿ ಒಟ್ಟು ನಾಲ್ಕು ಐಶಾರಾಮಿ ಕಾರುಗಳು ಇವೆ. ಕಾರಿನ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಕಾರುಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿ ಮತ್ತು ದಾಖಲೆಗಳನ್ನು ಕೆಜಿಎಫ್ ಬಾಬು ಅಧಿಕಾರಿಗಳಿಗೆ ನೀಡಿದ್ದಾರೆ.
ಯಾರೋ ಕಮಿಷನರ್‌ಗೆ ತಪ್ಪು ಮಾಹಿತಿ ನೀಡಿದ್ದಾರೆ. ನಾನು ಕಾನೂನಿಗೆ ಗೌರವ ನೀಡುತ್ತೇನೆ. ಈವರೆಗೆ ನೋಟಿಸ್ ಬಂದಿಲ್ಲ. ಇಂದು ಅವರು ಕೇಳಿದ ದಾಖಲೆಗಳನ್ನು ನೀಡುತ್ತೇನೆ ಮತ್ತು ತೆರಿಗೆ ಪಾವತಿಸುತ್ತೇನೆ ಎಂದು ಬಾಬು ಹೇಳಿದ್ದಾರೆ.