ಆರ್‌ಟಿಒ ಅಧಿಕಾರಿಗಳ ದಾಳಿ ಬಳಿಕ ಎರಡು ರೋಲ್ಸ್ ರಾಯ್ಸ್ ಕಾರುಗಳಿಗೆ ಉದ್ಯಮಿ ಕೆಜಿಎಫ್ ಬಾಬು 38 ಲಕ್ಷ ರೂ. ತೆರಿಗೆ ಪಾವತಿ ಮಾಡಿದ್ದಾರೆ. ಈ ಕಾರುಗಳನ್ನು ನಟರಾದ ಅಮಿತಾಬ್ ಬಚ್ಚನ್ ಹಾಗೂ ಆಮಿರ್ ಖಾನ್‌ರಿಂದ ಖರೀದಿಸಿದ್ದರು.
ಆಮಿರ್ ಖಾನ್‌ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರಿಗೆ 19.73 ಲಕ್ಷ ರೂ. ಹಾಗೂ ಅಮಿತಾಬ್ ಬಚ್ಚನ್ ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರಿಗೆ 18.53 ಲಕ್ಷ ರೂ. ತೆರಿಗೆ ಪಾವತಿ ಮಾಡಿದ್ದಾರೆ.
ಬೆಂಗಳೂರಿನ ವಸಂತನಗರದಲ್ಲಿರುವ ಕೆಜಿಎಫ್ ಬಾಬು ಅವರ ಮನೆ ಮೇಲೆ ಆರ್‌ಟಿಒ ಜಂಟಿ ಆಯುಕ್ತರಾದ ಶೋಭಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಐಷಾರಾಮಿ ಕಾರುಗಳ ಟ್ಯಾಕ್ಸ್ ಕಟ್ಟದೇ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಕಾರುಗಳನ್ನು ಸೀಜ್ ಮಾಡಲು ಆರ್‌ಟಿಒ ತಂಡ ಮುಂದಾಗಿತ್ತು. ಬಳಿಕ ಬಾಬು ಟ್ಯಾಕ್ಸ್ ಪಾವತಿ ಮಾಡಿದ್ದಾರೆ.
ಅಮಿರ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ಅವರಿಂದ ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಿದ್ದೆ. ಎರಡೂ ಕಾರುಗಳನ್ನು ಬಾಂಬೆಯಲ್ಲಿ ರಿಜೆಸ್ಟ್ರೇಷನ್ ಮಾಡಿಸಲಾಗಿತ್ತು. ಲೈಫ್ ಟ್ಯಾಕ್ಸ್ ಕೂಡ ಕಟ್ಟಲಾಗಿದೆ. ಕರ್ನಾಟಕದಲ್ಲೂ ಟ್ಯಾಕ್ಸ್ ಕಟ್ಟಬೇಕು ಅಂತ ಗೊತ್ತಿರಲಿಲ್ಲ. ಆರ್‌ಟಿಒ ಅಧಿಕಾರಿಗಳು ಈ ಬಗ್ಗೆ ಮನವರಿಕೆ ಮಾಡಿದ ನಂತ ತೆರಿಗೆ ಪಾವತಿಸಿದ್ದೇನೆ ಎಂದು ಬಾಬು ತಿಳಿಸಿದ್ದಾರೆ.
ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಶೋಭಾ ಮಾತನಾಡಿ, ಮಹಾರಾಷ್ಟ್ರ ರಿಜಿಸ್ಟ್ರೇಷನ್ ಕಾರುಗಳು ಕರ್ನಾಟಕದಲ್ಲಿ ಸಂಚರಿಸುತ್ತಿವೆ ಎಂಬ ಮಾಹಿತಿ ಇತ್ತು. ಮಾಹಿತಿ ಹಿನ್ನೆಲೆ ನಾವು ಬಂದು ಪರಿಶೀಲನೆ ನಡೆಸಿದ್ದೇವೆ. ಟ್ಯಾಕ್ಸ್ ವಿಚಾರ ಗೊತ್ತಿರಲಿಲ್ಲ ಅಂದಾಗ ನಾವು ಎಲ್ಲಾ ಟ್ಯಾಕ್ಸ್ ಲೆಕ್ಕ ಮಾಡಿ ಹೇಳಿದ ಕೂಡಲೇ ಕೆಜಿಎಫ್ ಬಾಬು ಡಿಡಿ ಮೂಲಕ ಟ್ಯಾಕ್ಸ್ ಪಾವತಿಸಿದರು ಎಂದು ಮಾಹಿತಿ ನೀಡಿದ್ದಾರೆ.