ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದಕಲಬುರಗಿ ಹೈಕೋರ್ಟ್ ಪೀಠ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿ, ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿದೆ.
ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಚಿತ್ತಾಪುರದಲ್ಲಿ ಆರೆಸ್ಸೆಸ್ ಭಾನುವಾರ ಬೃಹತ್ ಪಥಸಂಚಲನ ನಡೆಸಲು ಮುಂದಾಗಿತ್ತು. ನಗರದ ಮುಖ್ಯ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಕೇಸರಿ ಧ್ವಜ, ಭಗವಾ ಧ್ವಜ, ಬ್ಯಾನರ್, ಬಂಟಿಂಗ್‌ಗಳನ್ನೆಲ್ಲ ಪುರಸಭೆಯ ಸಿಬ್ಬಂದಿ ರಾತ್ರಿ ತೆರವುಗೊಳಿಸಿದ್ದರು. ತೆರವು ಖಂಡಿಸಿ ಚಿತ್ತಾಪುರ ಪುರಸಭೆಯ ಮುಖ್ಯಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗಿತ್ತು.
ಪಥ ಸಂಚಲನದ ವೇಳೆ ಲಾಠಿ, ಆಯುಧಗಳ ಬಳಕೆ ಬಗ್ಗೆ ಉಲ್ಲೇಖವಿಲ್ಲ, ಕಾರ್ಯಕ್ರಮದಲ್ಲಿ ಎಷ್ಟು ಜನ ಭಾಗವಹಿಸುತ್ತಾರೆ ಎಂಬ ಮಾಹಿತಿ ಇಲ್ಲ, ಸಂಘದ ನೋಂದಣಿ ಪ್ರಮಾಣಪತ್ರದ ಪ್ರತಿ ಸಲ್ಲಿಸಿಲ್ಲ. ಹೀಗಾಗಿ ತಹಸೀಲ್ದಾರ್ ವಿವರಣೆ ಕೋರಿದ್ದಾರೆ. ಪುರುಸಭೆ ನಿರ್ಧಾರ ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.
ಅ.13ರಂದು ಪೊಲೀಸರಿಗೆ ಭದ್ರತೆ ನೀಡಲು ಮಾಹಿತಿ ನೀಡಲಾಗಿತ್ತು. ಅ.17 ರಂದು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆದರೂ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು.
ದಲಿತ ಸಂಘಟನೆಗಳಾದ ಭೀಮ್ ಆರ್ಮಿ, ದಲಿತ ಪ್ಯಾಂಥರ್ ಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅನುಮತಿ ಕೊಡಬಾರದು. ಅವರಿಗೆ ಅನುಮತಿ ನೀಡುವುದಾದರೆ ನಾವೂ ಲಾಠಿ ಹಿಡಿದು ಪಥ ಸಂಚಲನ ಮಾಡುತ್ತೇವೆ, ನಮಗೂ ಅನುಮತಿ ಕೊಡಿ ಎಂದು ಮನವಿ ಮಾಡಿದ್ದಾರೆ.
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ವಿಧಿಸಿದ್ದ ನಿಷೇಧವನ್ನು ಹೈಕೋರ್ಟ್ ರದ್ದು ಮಾಡಿ, ನವೆಂಬರ್ 2ರಂದು ಪಥಸಂಚಲನ ನಡೆಸಲು ಅನುಮತಿ ನೀಡಿದೆ. ಕ್ಷೇತ್ರವನ್ನು ತಮ್ಮದೇ ರಿಪಬ್ಲಿಕ್ ಎಂದು ಭಾವಿಸಿಕೊಂಡು ದೇಶಭಕ್ತರ ಪಥಸಂಚಲನ ವನ್ನು ತಡೆಯಲು ಯತ್ನಿಸಿದ ಚಿತ್ತಾಪುರದ ‘ರಜಾಕರು’ ನ್ಯಾಯದ ಮುಂದೆ ತಲೆಬಾಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.


