ನವದೆಹಲಿ: ಇಂಡಿಗೋ ಸಂಸ್ಥೆಯ ಎಲ್ಲಾ ದೇಶೀಯ ವಿಮಾನಗಳ ವಿಳಂಬ ಮತ್ತು ರದ್ದತಿ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಬೇಕಾಬಿಟ್ಟಿ ದರ ನಿಗದಿ ಮಾಡಿ ಪ್ರಯಾಣಿಕರ ಲೂಟಿಗೆ ಮುಂದಾಗಿರುವುದಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ.
ಕಳೆದ 5 ದಿನಗಳಿಂದ ಇಂಡಿಗೋ ಸಂಸ್ಥೆಯ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಸಾವಿರಾರು ವಿಮಾನಯಾನಗಳು ರದ್ದುಗೊಂಡಿದ್ದರಿಂದ ಲಕ್ಷಾಂತರ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇದನ್ನೇ ಲಾಭ ಪಡೆಯಲು ಇತರೆ ವಿಮಾನ ಸಂಸ್ಥೆಗಳು ಮುಂದಾಗಿದ್ದವು.
20 ಸಾವಿರ ರೂ. ಇದ್ದ ವಿಮಾಯ ಪ್ರಯಾಣ ದರ 60 ಸಾವಿರದಿಂದ 80 ಸಾವಿರ ರೂ.ವರೆಗೆ ಏರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ವಿಮಾನಯಾನ ಸಚಿವಾಲಯ ಶನಿವಾರ ವಿಮಾನ ಪ್ರಯಾಣ ದರ ನಿಗದಿಪಡಿಸಿದೆ.
ಶನಿವಾರ ಹೊರಡಿಸಿದ ದರ ನಿಗದಿ ಪ್ರಕಾರ 500 ಕಿ.ಮೀ.ವರೆಗಿನ ಪ್ರಯಾಣಕ್ಕೆ 7,500 ರೂ., 500ರಿಂದ 1000 ಕಿ.ಮೀ. ದೂರದ ಪ್ರಯಾಣಕ್ಕೆ 12,000 ಸಾವಿರ ರೂ.., 1000ರಿಂದ 1500 ಕಿ.ಮೀ. ಪ್ರಯಾಣಕ್ಕೆ 15,000 ರೂ. ಹಾಗೂ 1500 ಕಿ.ಮೀ.ಗಿಂತ ಅಧಿಕ ದೂರದ ಪ್ರಯಾಣಕ್ಕೆ 18,000 ರೂ. ದರ ನಿಗದಿಪಡಿಸಿದೆ.
5ನೇ ದಿನಕ್ಕೆ ಕಾಲಿಟ್ಟ ಇಂಡಿಗೋ ಬಿಕ್ಕಟ್ಟು ಮತ್ತು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ನೂರಾರು ವಿಮಾನಗಳು ರದ್ದಾಗಿರುವುದರಿಂದ, ಪ್ರಯಾಣಿಕರನ್ನು ಹೆಚ್ಚಿನ ಶುಲ್ಕ ವಿಧಿಸದಂತೆ ರಕ್ಷಿಸಲು ವಿಮಾನ ದರಗಳನ್ನು ಮಿತಿಗೊಳಿಸಲು ತಕ್ಷಣದ ನಿರ್ದೇಶನಗಳನ್ನು ಹೊರಡಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಪ್ರಯಾಣಿಕರು ಸೇರಿದಂತೆ ಸಾವಿರಾರು ಪ್ರಯಾಣಿಕರು ವಿಮಾನಗಳ ವ್ಯಾಪಕ ರದ್ದತಿಯ ನಂತರ ಸೀಟುಗಳನ್ನು ಬುಕ್ ಮಾಡಲು ಹೆಣಗಾಡುತ್ತಿರುವ ಸಮಯದಲ್ಲಿ ಬೆಲೆಗಳ ಶಿಸ್ತನ್ನು ಕಾಪಾಡಿಕೊಳ್ಳಲು ಮತ್ತು ಶೋಷಣೆಯನ್ನು ತಡೆಯಲು ಈ ಕ್ರಮ ಅತ್ಯಗತ್ಯ ಎಂದು ಸರ್ಕಾರ ಹೇಳಿದೆ.
ವಿಮಾನಯಾನ ಸಂಸ್ಥೆಗಳು ಮತ್ತು ಆನ್ಲೈನ್ ಪ್ರಯಾಣ ಪ್ಲಾಟ್ಫಾರ್ಮ್ಗಳು ಪರಿಶೀಲನೆಗೆ ಒಳಪಡಲಿದ್ದು, ದರದ ಮಟ್ಟವನ್ನು ಈಗ ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಡಿಗೋ ವಿಮಾನಯಾನದಲ್ಲಿ ಐದನೇ ದಿನವೂ ಅವ್ಯವಸ್ಥೆ ಮುಂದುವರಿದಿದ್ದು, ವಿಮಾನ ದರದಲ್ಲಿ ಭಾರಿ ಏರಿಕೆಯಾಗಿದೆ. ವಿಮಾನ ಟಿಕೆಟ್ ಬೆಲೆಗಳು ತೀವ್ರವಾಗಿ ಏರಿದ್ದರಿಂದ ಪ್ರಯಾಣಿಕರು ಮತ್ತಷ್ಟು ತೊಂದರೆಗಳನ್ನು ಎದುರಿಸಿದ್ದಾರೆ. ಕೆಲವು ಮಾರ್ಗಗಳಲ್ಲಿನ ದರಗಳು ಸಾಮಾನ್ಯ ಮಟ್ಟಕ್ಕಿಂತ 4 ಪಟ್ಟು ಹೆಚ್ಚಾದವು. ಶುಕ್ರವಾರ ಒಂದೇ ದಿನ ಸುಮಾರು 1,000 ವಿಮಾನಗಳು ರದ್ದಾಗಿವೆ.


