ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಜಗತ್ತಿನಾದ್ಯಂತ 5000 ಕೋಟಿ ರೂ. ಬೆಟ್ಟಿಂಗ್ ನಡೆದಿದೆ ಎಂದು ಹೇಳಲಾಗಿದೆ.
ದುಬೈನಲ್ಲಿ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಬುಕ್ಕಿಗಳ ಪ್ರಕಾರ ಭಾರತ ತಂಡ ಹಾಟ್ ಫೇವರಿಟ್ ಆಗಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ಡಿ ಕಂಪನಿ ಕೂಡ ಬೆಟ್ಟಿಂಗ್ ಗೆ ಇಳಿದಿದೆ ಎಂದು ಹೇಳಲಾಗಿದೆ.
ದುಬೈ ಬೆಟ್ಟಿಂಗ್ ಗೆ ಹೇಳಿ ಮಾಡಿಸಿದ ಜಾಗವಾಗಿದ್ದು, ಪಾಕಿಸ್ತಾನದಲ್ಲಿ ಅಡಗಿದ್ದರೂ ದಾವೂದ್ ಗ್ಯಾಂಗ್ ಬೆಟ್ಟಿಂಗ್ ಜಾಲದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮೂಲಗಳು ಹೇಳಿವೆ.
ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಇದುವರೆಗ ಪ್ರಮುಖ 5 ಬುಕ್ಕಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಪ್ರವೀಣ್ ಕೊಚ್ಚಾರ್ ಮತ್ತು ಸಂಜಯ್ ಕುಮಾರ್ ಅವರನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದ ವೇಳೆ ಬೆಟ್ಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಬಂಧಿಸಲಾಗಿದೆ.
ಬಂಧಿತ ಇಬ್ಬರು ಬುಕ್ಕಿಗಳು ಲ್ಯಾಪ್ ಟಾಪ್ ಮತ್ತು ಮೊಬೈಲ್ ಬಳಸಿ ಬೆಟ್ಟಂಗ್ ನಲ್ಲಿ ಹೂಡಿಕೆ ಮಾಡುತ್ತಿದ್ದಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಕಿ.ಕಾಮ್ ವೆಬ್ ಸೈಟ್ ನಿಂದ ಪ್ರವೀಣ್ ಮಾಸ್ಟರ್ ಐಡಿ ಪಡೆದಿದ್ದು, ಇದನ್ನು ಬಳಸಿ ಬೆಟ್ಟಿಂಗ್ ನಡೆಸುತ್ತಿದ್ದ. ಬೆಟ್ಟಿಂಗ್ ಸಿಂಡಿಕೇಟ್ ಶೇ.3ರಷ್ಟು ಕಮಿಷನ್ ಪಡೆಯುತ್ತದೆ.
ಪ್ರವೀಣ್ ಕೊಚ್ಚರ್ ಬೆಟ್ಟಿಂಗ್ ದಂಧೆ ನಡೆಸುವುದಾಕ್ಕಾಗಿಯೇ ೩೫ ಸಾವಿರ ರೂ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಪ್ರತೀ ಪಂದ್ಯಕ್ಕೆ ಕನಿಷ್ಠ ೪೦ ಸಾವಿರ ರೂ. ಬೆಟ್ಟಿಂಗ್ ಹಣ ಹೂಡಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.