“ರಂಭಾಪುರಿ ಶ್ರೀಗಳು ನಿಂತು ಹೋಗಿದ್ದ ಭವನಕ್ಕೆ ನೀವು ಸಹಾಯ ಮಾಡಬೇಕು ಎಂದು ಹೇಳಿದ್ದರು. ನಾನು ಈ ಹಿಂದೆ ಸ್ವಲ್ಪ ಅಡಚಣೆಗಳಿವೆ ಎಂದು ತಡೆಯಲು ಹೇಳಿದ್ದೆ. ಈಗ ಸಮಯ ಒದಗಿ ಬಂದಿದೆ. ಐದು ಕೋಟಿ ರೂಪಾಯಿ ನೀಡಲಾಗುವುದು. ನಾನೇ ಖುದ್ದಾಗಿ ಬಂದು ಅದನ್ನು ಉದ್ಘಾಟನೆ ಮಾಡುತ್ತೇನೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಧರ್ಮ, ಪೂಜೆ, ಭಕ್ತಿ ಇವು ಪ್ರದರ್ಶನಕ್ಕೆ ಇರುವಂತಹ ಸಂಗತಿಗಳಲ್ಲ. ಇವು ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಲುವಾಗಿ ಇರುವ ಸಾಧನಗಳು. ನನ್ನ ಧರ್ಮ ಸರಿ, ನಿನ್ನ ಧರ್ಮ ತಪ್ಪು ಎನ್ನುವ ಕಲ್ಪನೆ ಎಲ್ಲಿಯೂ ಇಲ್ಲ” ಎಂದು ಡಿಸಿಎಂ ಡಿ.ಕೆ. ಅವರು ಅಭಿಪ್ರಾಯಪಟ್ಟಿದ್ದಾರೆ.
“ಆಕಾಶಾತ್ ಪತಿತಂ ತೋಯಂ ಯಥಾಗಚ್ಛತಿ ಸಾಗರಮ್ ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ. ಅಂದರೆ ಎಷ್ಟೇ ದೇವರಿಗೆ ನಮಸ್ಕಾರ ಮಾಡಿದರೂ ಸಹ ಅದು ಒಂದೇ ದೇವರಿಗೆ ತಲುಪುತ್ತದೆ, ಎಷ್ಟೇ ನದಿಗಳಿದ್ದರೂ ಅವು ಸೇರುವುದು ಒಂದೇ ಸಾಗರಕ್ಕೆ. ಶಿವನ ಲಿಂಗಕ್ಕೆ ಇದೇ ಆಕಾರ ಎಂಬುದು ಇಲ್ಲ. ಇಲ್ಲಿ ಇರುವುದು ನಮ್ಮ ಭಕ್ತಿ” ಎಂದು ಹೇಳಿದರು.
“ಒಕ್ಕಲಿಗನಾಗಿ ಗಂಗಾಧರ ಅಜ್ಜಯ್ಯ ಅವರ ಹೆಸರಿನಲ್ಲಿ ನೀನು ಏಕೆ ಪ್ರಮಾಣ ವಚನ ಸ್ವೀಕಾರ ಮಾಡಿದೆ ಎಂದು ಕೇಳಿದರು. ಅದಕ್ಕೆ ನಾನು ಇದು ನನ್ನ ನಂಬಿಕೆ ಎಂದು ಹೇಳಿದೆ. ಅವರು ನನಗೆ ಆತ್ಮಬಲವನ್ನು ತುಂಬಿದ್ದಾರೆ. ರಂಭಾಪುರಿ ಶ್ರೀಗಳು ನನಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ” ಎಂದರು.
“ಅಜ್ಜಯ್ಯ ಅವರು ನನಗೆ ನೀಡಿದ ಸಾಕ್ಷಾತ್ಕಾರವನ್ನ ಬಹಿರಂಗ ಮಾಡಲು ಆಗುವುದಿಲ್ಲ. ಸಮಯ ಬಂದಾಗ ಪುಸ್ತಕ ರೂಪದಲ್ಲಿ ಹೊರತರುತ್ತೇನೆ. ಎನ್ನ ಪರಮಗುರು ನೀವೇ, ಎನ್ನ ಗತಿ ಮತಿ ನೀವೇ, ಎನ್ನ ಅರಿವಿನ ಜ್ಯೋತಿ ನೀವೇ, ಎನ್ನ ಅಂತರಂಗ ಬಹಿರಂಗ ನೀವೇ ಕೂಡಲಸಂಗಮದೇವಾ ಎಂದು ಬಸವಣ್ಣ ಹೇಳುತ್ತಾರೆ. ಅಂದರೆ ಗುರುವಿಲ್ಲದೇ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
“ವೀರಶೈವ, ಲಿಂಗಾಯತ ಧರ್ಮ ಹೋರಾಟ ನಡೆಯುತ್ತಿತ್ತು. ಆಗ ಶ್ರೀಗಳ ಪಾದಕ್ಕೆ ನಮಸ್ಕಾರ ಮಾಡಿ ನಮ್ಮಿಂದ ತಪ್ಪಾಯಿತು ಕ್ಷಮಿಸಿ ಎಂದು ನಾನು ಪ್ರಾರ್ಥಿಸಿದ್ದೆ. ಇಡೀ ರಾಜ್ಯದಲ್ಲಿಯೇ ಇದರ ಬಗ್ಗೆ ಚರ್ಚೆ, ಟೀಕೆ, ಟಿಪ್ಪಣಿಯಾಯಿತು. ಆಗ ನಾನು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿ, ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕಬೇಕು ಎಂದಿದ್ದೆ” ಎಂದು ಹೇಳಿದರು.
“ಧರ್ಮ ಯಾವುದಾದರೂ ಇರಲಿ, ತತ್ವ, ನಾಮ ನೂರಾರೂ ಇದ್ದರು ದೈವವೊಂದೇ. ಪೂಜೆ ಹಲವಾದರೂ ಭಕ್ತಿಯೊಂದೇ, ದೇವನೊಬ್ಬ ನಾಮ ಹಲವು. ಮಾನವಧರ್ಮಕ್ಕೆ ಜಯವಾಗಲಿ, ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಅಜ್ಜಯ್ಯ ಹೇಳಿದ್ದಾರೆ. ಅವರ ಮಾತಿನಂತೆ ನಾವೆಲ್ಲರೂ ನಡೆಯಬೇಕು. ಜೊತೆಗೆ ಸಾಹಿತ್ಯ, ಸಂಸ್ಕೃತಿ ಸಮೃದ್ದಿಯಾಗಲಿ. ಶಾಂತಿ ಸದ್ಬುದ್ದಿ ಸರ್ವರಿಗೂ ದೊರಕಲಿ, ಧರ್ಮಕ್ಕಾಗಿ ಏಳಲಿ, ಬಾಳಲಿ, ಆಳಲಿ ಎಂದಿದ್ದಾರೆ” ಎಂದರು.
“ಅಕ್ಕಿ ಹಾಗೂ ಅರಿಶಿನ ಬೇರೆ ಬೇರೆ ಇವೆರಡೂ ಬೆರೆತರೆ ಮಂತ್ರಾಕ್ಷತೆಯಾಗುತ್ತದೆ. ಅದೇ ರೀತಿ ಇಂದು ನನ್ನ ಕೈಯಿಂದ ಅನೇಕ ಕೆಲಸಗಳಿಗೆ ಶಂಕುಸ್ಥಾಪನೆ ಮಾಡಿಸಲಾಗಿದೆ. ಉದ್ಘಾಟನೆ ಮಾಡಿಸಲಾಗಿದೆ. ನಾವುಗಳು ಯಾರೂ ಸಹ ಇದೇ ಜಾತಿಯಲ್ಲಿ ಹುಟ್ಟುಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಪೂರ್ವಜನ್ಮದ ಪುಣ್ಯ” ಎಂದು ಹೇಳಿದರು.
“ರಂಭಾಪುರಿ ಮಠ ಒಂದು ಧರ್ಮದ ಆಸ್ತಿಯಲ್ಲ. ಮಾನವ ಧರ್ಮದ ಆಸ್ತಿ. ನಾನು ಸಹ ಈ ಮಠದ ಭಕ್ತ. ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುವವನು. ನಾವು ಮಾಡುವ ಒಳ್ಳೆ ಕೆಲಸಗಳಿಗೆ ಶ್ರೀಗಳ ಆಶೀರ್ವಾದ ಮುಖ್ಯ” ಎಂದು ಹೇಳಿದರು.
“ನಮ್ಮ ಕುಟುಂಬದಲ್ಲಿ ಯಾರೇ ಜನಿಸಿದರು ಕೆಂಪೇಗೌಡ ಎಂದೇ ನಾಮಕರಣ ಮಾಡುವುದು. ನಮ್ಮ ಅಜ್ಜ, ಮುತ್ತಜ್ಜ, ತಂದೆಯ ಹೆಸರು ಸಹ ಕೆಂಪೇಗೌಡ. ನಮ್ಮ ತಂದೆ- ತಾಯಿಗೆ ಮಕ್ಕಳ ಜನನ ಸ್ವಲ್ಪ ತಡವಾದಾಗ ನಮ್ಮ ಊರಿನ ಬಳಿ ಇರುವ ಶಿವಾಲ್ದಾಪ್ಪ ಬೆಟ್ಟದಲ್ಲಿನ ಶಿವನಿಗೆ ಪೂಜಿಸದ ಮೇಲೆ ನನ್ನ ಜನನವಾಯಿತು. ಅದಕ್ಕೆ ನನಗೆ ಶಿವಕುಮಾರ ಎಂದು ಹೆಸರಿಟ್ಟಿದ್ದಾರೆ” ಎಂದರು.
“ನನಗೂ ವೀರಶೈವರಿಗೂ ಯಾವ ಕಾರಣಕ್ಕೆ ಅವಿನಾಭಾವ ಸಂಬಂಧ ಉಂಟಾಗಿದೆ ಎನ್ನುವುದು ಗೊತ್ತಿಲ್ಲ. ನಾನು ಪಿಯು ವಿದ್ಯಾಭ್ಯಾಸವನ್ನು ವೀರಶೈವ ಸಂಸ್ಥೆಯಲ್ಲಿ ಪೂರ್ಣಗೊಳಿಸಿದೆ. ನಂತರ ವೀರ ಗಂಗಾಧರ ಅಜ್ಜನವರು ಸ್ಥಾಪಿಸಿದ್ದ ರೇಣುಕಾಚಾರ್ಯ ಸಂಸ್ಥೆಯಲ್ಲಿ ಪದವಿ ಓದುತ್ತಿದ್ದೆ. ನಾನು ವೀರ ಗಂಗಾಧರ ಅಜ್ಜನವರ ಪರಮಭಕ್ತ. ಅವರನ್ನು ಸಂಪೂರ್ಣವಾಗಿ ನಂಬಿ ಕೆಲಸ ಮಾಡುವವನು” ಎಂದು ಹೇಳಿದರು.


