Menu

5 ಕೋಟಿ ರೂ. ಸಿಎಂ ವಿಶೇಷ ಅನುದಾನ ಆಮಿಷವೊಡ್ಡಿ 50 ಲಕ್ಷ ರೂ. ಕಮಿಷನ್‌ ವಂಚನೆ

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಐದು ಕೋಟಿ ರೂ. ಮಂಜೂರು ಮಾಡಿಸುವುದಾಗಿ ವ್ಯಕ್ತಿಯನ್ನು ನಂಬಿಸಿ 50 ಲಕ್ಷ ರೂ. ಕಮಿಷನ್‌ ಪಡೆದು ವಂಚಿಸಿದ ಆರೋಪದಡಿ ಅನ್ನಪೂಣೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ನಾಗರಬಾವಿ ನಿವಾಸಿ ವೆಂಕಟೇಶ್ ಬಾಬು ಹರೀಶ್ ಹಾಗೂ ಸಂದೀಪ್ ಎಂಬವರ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ.

2024ರ ಅಕ್ಟೋಬರ್‌ನಲ್ಲಿ ದೂರುದಾರನ ಮನೆಗೆ ಹೋಗಿದ್ದ ಆರೋಪಿ ಹರೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಆಪ್ತ ಸಂದೀಪ್ ಎಂಬಾತನ ಪರಿಚಯವಿದೆ. ಎಂಎಲ್‌ಎ ಲೆಟರ್ ಹೆಡ್ ಮೇಲೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಐದು ಕೋಟಿ ರೂ.. ಬಿಡುಗಡೆ ಮಾಡಿಸಿ ಕೊಡುತ್ತೇನೆ ಎಂದು ನಂಬಿಸಿದ್ದ. ಶೇ.10 ರಂತೆ 50 ಲಕ್ಷ ರೂ. ನೀಡುವಂತೆ ಕೇಳಿದ್ದ. ಒಪ್ಪಿದ್ದ ವೆಂಕಟೇಶ್‌ಬಾಬು ವಂಚಕ ಹರೀಶ್‌ಗೆ 2024ರ ನವೆಂಬರ್‌ನಲ್ಲಿ 25 ಲಕ್ಷ ರೂ.. ನೀಡಿದ್ದರು. 2025ರ ಮಾರ್ಚ್‌ನಲ್ಲಿ ಪತ್ರ ಬಿಡುಗಡೆ ಮಾಡುವುದಾಗಿ ಬಾಕಿ ಇದ್ದ 25 ಲಕ್ಷ ರೂ. ಮತ್ತೊಬ್ಬ ಆರೋಪಿ ಸಂದೀಪ್‌ಗೆ ನೀಡಿದ್ದರು.

ಆರು ತಿಂಗಳಿಂದ 2-3 ಬಾರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರಿದ ಪತ್ರಗಳನ್ನು ಆರೋಪಿಗಳು ನೀಡಿದ್ದರು. ಹಣ ಬಿಡುಗಡೆ ಮಾಡಿಸಿರಲಿಲ್ಲ. ಪ್ರತಿ ಬಾರಿಯೂ ನೆಪ ಹೇಳುತ್ತಿದ್ದರು. ಸೆ.19 ರಂದು ವೆಂಕಟೇಶ್ ಬಾಬು ಆರ್‌ಡಿಪಿಆರ್ ಕಚೇರಿಗೆ ಹೋಗಿ ವಿಚಾರಿಸಿದಾಗ ಕೊಟ್ಟಿರುವುದು ನಕಲಿ ಪತ್ರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರೀಶ್‌ಗೆ ಕರೆ ಮಾಡಿದಾಗ ಮೊಬೈಲ್‌ ನಂಬರ್ ಸ್ವಿಚ್ಡ್ ಆಫ್‌ ಆಗಿತ್ತು. ಬಳಿಕ ಸಂದೀಪ್ ಮತ್ತು ಹರೀಶ್‌ ವಿರುದ್ಧ ದೂರು ನೀಡಿದ್ದಾರೆ. ವಂಚನೆಗೆ ಸಂಬಂಧಿಸಿದಂತೆ ವೆಂಕಟೇಶ್‌ ಬಾಬು ನೀಡಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *