ಬೆಂಗಳೂರು: ನೇಕಾರರ ಅಭಿವೃದ್ಧಿಗೆ ಸರ್ಕಾರ ನೇಕಾರ ಸಮ್ಮಾನ್ ಯೋಜನೆ, ಉಚಿತ ವಿದ್ಯುತ್ ಪೂರೈಕೆ, ಮಾರುಕಟ್ಟೆ ಪ್ರೋತ್ಸಾಹ ಧನ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದು, ಪ್ರತಿಶತ 20 ರಿಯಾಯಿತಿ ಮಾರುಕಟ್ಟೆ ಪ್ರೋತ್ಸಾಹಧನ ಯೋಜನೆಯಲ್ಲಿ ಕೈಮಗ್ಗ ನೇಕಾರರ ಸಹಕಾರ ಸಂಘ ಹಾಗೂ ಮಹಾ ಮಂಡಳಿಗೆ ಒಟ್ಟು 5.04 ಕೋಟಿ ರೂ. ಗಳನ್ನು ಮರು ಸಂದಾಯ ಮಾಡಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ವಿಧಾನಪರಿಷತ್ತಿಗೆ ತಿಳಿಸಿದ್ದಾರೆ.
ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೇಕಾರರ ಅಭಿವೃದ್ಧಿಗೆ ಪೂರಕ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದ್ದು, ಸಭೆ ಕರೆದು, ಪರಿಣಿತರ ಸಲಹೆ, ಅಭಿಪ್ರಾಯ ಸಂಗ್ರಹಿಸಿ ನೀತಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿದ್ಯುತ್ ಮಗ್ಗ ನೇಕಾರರಿಗೆ 10 ಹೆಚ್‌ಪಿವರೆಗೆ ಉಚಿತ ಹಾಗೂ 20 ಹೆಚ್‌ಪಿವರೆಗೆ ಪ್ರತಿ ಯೂನಿಟ್‌ಗೆ ರೂ. 1.25 ರೂ.ಗಳಂತೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಬಾಕಿ ಹಣವನ್ನು ಸರ್ಕಾರ ವಿದ್ಯುತ್ ಕಂಪನಿಗಳಿಗೆ ಪಾವತಿಸುತ್ತಿದೆ. ಈ ಯೋಜನೆಯಲ್ಲಿ ಒಂದರಿಂದ ಹತ್ತು ಹೆಚ್‌ಪಿವರೆಗಿನ ಸುಮಾರು 29,288 ಘಟಕಗಳು ಹಾಗೂ 10ರಿಂದ 20 ಹೆಚ್‌ಪಿವರೆಗಿನ 2,067 ವಿದ್ಯುತ್ ಮಗ್ಗ ಹಾಗೂ ಮಗ್ಗಪೂರ್ವ ಘಟಕಗಳು ಪ್ರಯೋಜನ ಪಡೆಯುತ್ತಿವೆ ಎಂದು ತಿಳಿಸಿದರು.
ನೇಕಾರರ ಉತ್ಪನ್ನಗಳಿಗೆ ಸರ್ಕಾರ ಮಾರುಕಟ್ಟೆ ಸೃಷ್ಟಿ ಮಾಡುತ್ತಿದ್ದು, 2024-25ನೇ ಸಾಲಿನಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಡಿ ನೇಕಾರರು ಉತ್ಪಾದಿಸಿದ 21.58 ಕೋಟಿ ಮೊತ್ತದ ಕೈಮಗ್ಗ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ. ಕಾವೇರಿ ಹ್ಯಾಂಡ್‌ಲೂಮ್ಸ್ ಅಡಿ ಕೈಮಗ್ಗ ನೇಕಾರರ ಸಹಕಾರ ಸಂಘಗಳು ಉತ್ಪಾದಿಸಿದ 25.06 ಲಕ್ಷ ಮೊತ್ತದ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಡಿಯಲ್ಲಿ ಒಟ್ಟು 8 ಪ್ರಿಯದರ್ಶಿನಿ ಮಾರಾಟ ಮಳಿಗೆಗಳಿದ್ದು, ಈ ಮಳಿಗೆಗಳ ಮೂಲಕ 2024-25ನೇ ಸಾಲಿನಲ್ಲಿ 4.54 ಕೋಟಿ ರೂ., 2025-56ನೇ ಸಾಲಿನಲ್ಲಿ ಜುಲೈ ಅಂತ್ಯಕ್ಕೆ 1.43 ಕೋಟಿ ರೂ. ಮೊತ್ತದ ವಹಿವಾಟು ಮಾಡಲಾಗಿದೆ.2024-25ನೇ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆಗೆ 17.04 ಕೋಟಿ ರೂ. ಮೊತ್ತದ ಸಮವಸ್ತ್ರಗಳನ್ನು ಪೂರೈಕೆ ಮಾಡಲಾಗಿದ್ದು, ಇದರಿಂದ 3435 ಕೈಮಗ್ಗ ನೇಕಾರರಿಗೆ ನೇರವಾಗಿ ಲಾಭವಾಗಿದೆ ಎಂದು ತಿಳಿಸಿದರು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಕೈಮಗ್ಗ ನೇಕಾರರ ಉತ್ಪನ್ನಗಳನ್ನು ಪ್ರಿಯದರ್ಶಿನಿ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇತ್ತೀಚೆಗೆ ಆನ್‌ಲೈನ್‌ನಲ್ಲೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಕೇಶವಪ್ರಸಾದ್ ಅವರು ನೇಕಾರರ ಅಭಿವೃದ್ಧಿ ದೃಷ್ಟಿಯಿಂದ ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಸರ್ಕಾರ ಈ ಬಗ್ಗೆ ಕೂಡ ಗಮನ ಹರಿಸಿದೆ ಎಂದು ಹೇಳಿದರು.
ಕೈಮಗ್ಗ ನೇಕಾರರ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಹಾಗೂ ಬೆಂಬಲ ನೀಡಲು ರೇಷ್ಮೆ, ಹತ್ತು ಮತ್ತು ಉಣ್ಣೆ ಈ ಮೂರು ಕ್ಷೇತ್ರಗಳಲ್ಲಿ ನೈಪುಣ್ಯತೆ, ಶ್ರೇಷ್ಠತೆ, ತಾಂತ್ರಿಕತೆ, ಉತ್ಕೃಷ್ಟತೆ ಆಧರಿಸಿ ನೇಕಾರರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗುತ್ತಿದೆ. ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಮುದ್ರಾ ಯೋಜನೆ ಅಡಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಡಿ ನೋಂದಾಯಿತ ನೇಕಾರರಿಗೆ ಕಚ್ಚಾ ನೂಲನ್ನು ಒದಗಿಸಿ ಅವರು ಉತ್ಪಾದಿಸಿದ ಬಟ್ಟೆಗಳನ್ನು ಸ್ವೀಕರಿಸಿ ಪರಿವರ್ತನಾ ಶುಲ್ಕ ನೀಡಲಾಗುತ್ತಿದೆ ಎಂದು ವಿವರಿಸಿದರು.