ಬೆಂಗಳೂರು: ಹೈನುಗಾರಿಕೆಗೆ ಎಮ್ಮೆ ಗುಜರಾತ್ ನ ವಿಶೇಷ ಎಮ್ಮೆಗಳನ್ನು ಕೊಡಿಸುತ್ತೇವೆ ಎಂದು 4.5 ಲಕ್ಷ ರೂ. ವಂಚಿಸಿದ್ದು, ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರೇಮ್ ಅವರ ಮ್ಯಾನೇಜರ್ ಆಗಿರುವ ದಶಾವರ ಚಂದ್ರು ಎಂಬವರು ನೀಡಿರುವ ದೂರಿನ ಅನ್ವಯ ಗುಜರಾತ್ ಮೂಲದ ವಘೇಲಾ ವನರಾಜ್ ಭಾಯ್ ಎಂಬಾತನ ವಿರುದ್ಧ ಚಂದ್ರಾಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರೇಮ್ ಅವರು ಹೈನುಗಾರಿಕೆ ಮಾಡಲು ಎಮ್ಮೆಗಳನ್ನು ಖರೀದಿಸಲು ಮುಂದಾದಾಗ ಗುಜರಾತ್ನ ಗಧಡಾ ಮೂಲದ ವನರಾಜ್ ಭಾಯ್ ಎಂಬಾತನ ಪರಿಚಯವಾಗಿತ್ತು. ಎಮ್ಮೆಗಳ ಖರೀದಿ ಮಾತುಕತೆ ಮಾಡಿದ್ದ ಪ್ರೇಮ್, ಜುಲೈನಲ್ಲಿ 25 ಸಾವಿರ ರೂ. ಮುಂಗಡ ಹಣ ವರ್ಗಾಯಿಸಿದ್ದರು. ಬಳಿಕ ಹಂತ – ಹಂತವಾಗಿ ಒಟ್ಟು 4.50 ಲಕ್ಷ ರೂ. ಹಣವನ್ನು ಆರೋಪಿ ವನರಾಜ್ ಭಾಯ್ ಖಾತೆಗೆ ವರ್ಗಾಯಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಾಟ್ಸಪ್ ಮೂಲಕ ಎರಡು ಎಮ್ಮೆಗಳ ವಿಡಿಯೋ ಕಳಿಸಿದ್ದ ವನರಾಜ್ ಭಾಯ್, ಅವುಗಳನ್ನ ಕಳಿಸಿಕೊಡುತ್ತಿರುವುದಾಗಿ ತಿಳಿಸಿದ್ದ. ಆದರೆ, ವಾರ ಕಳೆದರೂ ಎಮ್ಮೆಗಳು ಬಾರದಿದ್ದಾಗ ಹಣ ವಾಪಸ್ ನೀಡುವಂತೆ ಪ್ರೇಮ್ ಕೇಳಿದ್ದರು. ಆದರೆ ಹಣ ನೀಡದ ವನರಾಜ್ ಭಾಯ್ ಸತಾಯಿಸುತ್ತಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ವನರಾಜ್ ಭಾಯ್ ನೀಡಿದ್ದ ವಿಳಾಸಕ್ಕೆ ಪರಿಚಿತರನ್ನು ಕಳುಹಿಸಿ ವಿಚಾರಿಸಿದಾಗ ಆತ ಆ ವಿಳಾಸದಲ್ಲಿ ಇಲ್ಲ ಎಂದು ತಿಳಿದು ಬಂದಿದೆ. ಮೊಬೈಲ್ ಸ್ವಿಚಾಫ್ ಮಾಡಿಕೊಂಡಿದ್ದಾರೆ. ವನರಾಜ್ ಭಾಯ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಮ್ಮ ಮ್ಯಾನೇಜರ್ ದಶಾವರ ಚಂದ್ರು ಮೂಲಕ ಪ್ರೇಮ್ ದೂರು ಕೊಡಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಾಲೇಔಟ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದು, ಹಣ ವರ್ಗಾವಣೆಯಾದ ಖಾತೆಯ ವಿವರಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.