Menu

ಬಂಗಾಳದಲ್ಲಿ ಮಹಿಳೆಯರಿಗೆ, ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3 ಸಾವಿರ ರೂ.: ಬಿಜೆಪಿ ಘೋಷಣೆ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರತಿ ತಿಂಗಳು ಮಹಿಳೆಯರಿಗೆ 3 ಸಾವಿರ ರೂ., ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಿಜೆಪಿಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ 15 ಭರವಸೆಗಳನ್ನು ನೀಡಿದ್ದಾರೆ. ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ, ಆಯುಷ್ಮಾನ್ ಭಾರತ್ ಯೋಜನೆಯ ವಿಸ್ತರಣೆ ಮತ್ತು ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣೆ ಹಾಗೂ ಹೆಚ್‌ಪಿವಿ ಲಸಿಕೆ  ನೀಡುವುದಾಗಿ ಪ್ರಕಟಿಸಿದ್ದಾರೆ.

ಬಿಜೆಪಿ ಸರ್ಕಾರ ಬಂದ 45 ದಿನಗಳೊಳಗೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿ. ಐದು ವರ್ಷಗಳಲ್ಲಿ 1 ಕೋಟಿ ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳ ಸೃಷ್ಟಿ. ಅಧಿಕಾರಕ್ಕೆ ಬಂದ 6 ತಿಂಗಳೊಳಗೆ ರಾಜ್ಯದಲ್ಲಿ ಏಕರೂಪ ನಾಗರಿಕ ನೀತಿಸಂಹಿತೆ ಜಾರಿ. ಅಕ್ರಮ ನುಸುಳುವಿಕೆಯನ್ನು ಪತ್ತೆಹಚ್ಚಿ, ಡಿಲೀಟ್ ಮಾಡಿ, ಗಡಿಪಾರು ಮಾಡುವ ಕಠಿಣ ನೀತಿ. ಕಳೆದ 15 ವರ್ಷಗಳ ಭ್ರಷ್ಟಾಚಾರ ಮತ್ತು ಅಪರಾಧ ಪ್ರಕರಣಗಳ ಮರುತನಿಖೆ ಹಾಗೂ ತಪ್ಪಿತಸ್ಥರಿಗೆ ಜೈಲು ಶಿಕ್ಷೆ. ಟಿಎಂಸಿ ಆಡಳಿತದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ಶ್ವೇತಪತ್ರ ಪ್ರಕಟಣೆ. ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಕುರ್ಮಾಲಿ ಮತ್ತು ರಾಜ್‌ಬೋಂಗ್‌ಶಿ ಭಾಷೆಗಳ ಸೇರ್ಪಡೆಯ ಭರವಸೆಯನ್ನು ಬಿಜೆಪಿ ನೀಡಿದೆ.

ಉತ್ತರ ಬಂಗಾಳದಲ್ಲಿ ಹೊಸ AIIMS, IIT ಮತ್ತು IIM ಸ್ಥಾಪನೆ, ಸಿಂಗೂರಿನಲ್ಲಿ ಬೃಹತ್ ಕೈಗಾರಿಕಾ ಪಾರ್ಕ್ ನಿರ್ಮಾಣ. ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ಮತ್ತು ವಂದೇ ಮಾತರಂ ಮ್ಯೂಸಿಯಂ ಸ್ಥಾಪನೆ. ಆಲೂಗಡ್ಡೆ, ಭತ್ತ ಮತ್ತು ಮಾವು ಬೆಳೆಗಾರರಿಗೆ ಬೆಂಬಲ ಹಾಗೂ ಬಂಗಾಳವನ್ನು ಮೀನು ರಫ್ತು ಹಬ್ ಆಗಿ ಪರಿವರ್ತಿಸಲು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಗೊಳಿಸುವುದಾಗಿ ತಿಳಿಸಿದೆ.

Related Posts

Leave a Reply

Your email address will not be published. Required fields are marked *