Menu

ಗರ್ಭಿಣಿಯನ್ನಾಗಿಸಿದ್ರೆ 25 ಲಕ್ಷ ರೂ.: ಜಾಹೀರಾತು ನಂಬಿ ಕಳಕೊಂಡಿದ್ದು 11 ಲಕ್ಷ ರೂ.

ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನ “ಗರ್ಭಿಣಿ ಉದ್ಯೋಗ” ಪೇಜ್‌ನಲ್ಲಿ “ನನ್ನನ್ನು ತಾಯಿ ಮಾಡುವ ವ್ಯಕ್ತಿ ಬೇಕು, 25 ಲಕ್ಷ ರೂ. ನೀಡುತ್ತೇನೆ” ಎಂಬ ಆಕರ್ಷಕ ವೀಡಿಯೊ ಜಾಹೀರಾತು ನೋಡಿದ ಪುಣೆಯ 44 ವರ್ಷದ ಗುತ್ತಿಗೆದಾರ ಆಸೆಗೆ ಬಲಿಯಾಗಿ 11 ಲಕ್ಷ ರೂ. ಕಳೆದುಕೊಂಡಿದ್ದಾರೆ.

ನಾನಾ ರೂಪಗಳಲ್ಲಿ ಸೈಬರ್‌ ವಂಚನೆಯ ಜಾಲ ವಿಸ್ತರಣೆಯಾಗುತ್ತಿದ್ದು, ಬಹಳಷ್ಟು ಮಂದಿ ಮೋಸಕ್ಕೆ ಸಿಲುಕಿ ಹಣ ಮಾತ್ರವಲ್ಲದೆ ಜೀವ ಕಳೆದುಕೊಳ್ಳುವ ಪರಿಸ್ಥಿತಿಗಳು ಆಗಾಗ ವರದಿಯಾಗುತ್ತಿವೆ, ಆದರೆ ಜನ ಮಾತ್ರ ಎಚ್ಚೆತ್ತುಕೊಳ್ಳುವುದೇ ಇಲ್ಲ, ಅತಿಯಾಸೆಗೆ ಬಲಿಯಾಗುತ್ತಲೇ ಇರುತ್ತಾರೆ.

ಪುಣೆಯ ಬನೇರ್ ನಿವಾಸಿಯಾದ ಗುತ್ತಿಗೆದಾರ ಸೆಪ್ಟೆಂಬರ್ ಮೊದಲ ವಾರದಲ್ಲಿ ಫೇಸ್‌ಬುಕ್‌ನಲ್ಲಿ “ಗರ್ಭಿಣಿ ಉದ್ಯೋಗ” ಪೇಜ್‌ನ ಪೋಸ್ಟ್‌ನಲ್ಲಿದ್ದ ವೀಡಿಯೊದಲ್ಲಿ ಒಬ್ಬ ಮಹಿಳೆಯು, “ನನ್ನನ್ನು ತಾಯಿಯಾಗಿಸುವ ವ್ಯಕ್ತಿ ಬೇಕು. ನಾನು ಅವನಿಗೆ 2.5 ಮಿಲಿಯನ್ ರೂಪಾಯಿಗಳು (25 ಲಕ್ಷ) ನೀಡುತ್ತೇನೆ. ಅವನ ಜಾತಿ, ಬಣ್ಣ ಅಥವಾ ಶಿಕ್ಷಣ ಏನೇ ಇರಲಿ.” ಎಂದು ಹೇಳುವುದನ್ನು ವೀಕ್ಷಿಸಿದ್ದಾರೆ.

ವೀಡಿಯೊ ಕೊನೆಯಲ್ಲಿ ಮೊಬೈಲ್ ಸಂಖ್ಯೆ ನೀಡಲಾಗಿತ್ತು. 25 ಲಕ್ಷದ ಆಮಿಷಕ್ಕೆ ಒಳಗಾದ ಗುತ್ತಿಗೆದಾರತಕ್ಷಣ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ವ್ಯಕ್ತಿ “ಗರ್ಭಿಣಿ ಉದ್ಯೋಗ ಕಂಪನಿ”ಯ ಸಹಾಯಕ ಎಂದು ಪರಿಚಯಿಸಿಕೊಂಡ. ಮೊದಲು ನೋಂದಣಿ ಮಾಡಿಕೊಳ್ಳಬೇಕು, ಗುರುತಿನ ಚೀಟಿ ಸಲ್ಲಿಸಬೇಕು ಎಂದ, ನಂತರ ಹಂತ ಹಂತವಾಗಿ ಶುಲ್ಕಗಳ ಹೆಸರಿನಲ್ಲಿ 11 ಲಕ್ಷ ರೂ. ಕಸಿದುಕೊಳ್ಳಲಾಗಿದೆ. “ಪ್ರಕ್ರಿಯೆ ನಡೆಯುತ್ತಿದೆ, ಮಹಿಳೆ ಶೀಘ್ರದಲ್ಲೇ ಬರುತ್ತಾಳೆ” ಎಂದು ಭರವಸೆ ನೀಡಲಾಗುತ್ತಿತ್ತು.

ಕೊನೆಗೆ ಗುತ್ತಿಗೆದಾರನಿಗೆ ಅನುಮಾನ ಬಂದು ಅಕ್ಟೋಬರ್ 23ರಂದು ಬನೇರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರ ಪ್ರಕಾರ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂತಹ ಪ್ರಕರಣಗಳು ದಾಖಲಾಗಿವೆ.

Related Posts

Leave a Reply

Your email address will not be published. Required fields are marked *