ಶ್ರೀನಗರ:ಕಾಶ್ಮೀರದ ಪಹಲ್ಗಾಮ್ನಲ್ಲಿ ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರ ಬಗ್ಗೆ ಸುಳಿವು ಅಥವಾ ಹಿಡಿದು ಕೊಟ್ಟವರಿಗೆ 20 ಲಕ್ಷ ರೂ ನಗದು ಬಹುಮಾನ ಘೋಷಿಸಲಾಗಿದೆ.
ಪ್ರವಾಸಿಗರ ಹತ್ಯೆ ಮಾಡಿದ ಉಗ್ರರ ಪತ್ತೆ ಕಾರ್ಯ ನಡೆಯುತ್ತಿದೆ. ಶಂಕಿತ ಮೂವರು ಉಗ್ರರು ಇನ್ನೂ ಸಿಗದ ಕಾರಣ, ಅವರ ಫೋಟೋಗಳನ್ನು ಕಾಶ್ಮೀರದ ವಿವಿಧ ಭಾಗಗಳಲ್ಲಿ ಅಂಟಿಸಲಾಗುತ್ತಿದೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಏಪ್ರಿಲ್ 22ರಂದು ಪ್ರವಾಸಿ ತಾಣವಾದ ಬೈಸರನ್ ಹುಲ್ಲುಗಾವಲ್ಲಿನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಹತ್ಯಾಕಾಂಡ ನಡೆಸಿದ್ದಾರೆ ಎಂದು ಹೇಳಲಾದ ಮೂವರು ಭಯೋತ್ಪಾದಕರ ರೇಖಾಚಿತ್ರಗಳನ್ನು ಭದ್ರತಾ ಸಿಬ್ಬಂದಿ ಬಿಡುಗಡೆ ಮಾಡಿದ್ದಾರೆ.
ಪೋಸ್ಟರ್ಗಳಲ್ಲಿ ಉಗ್ರರ ಫೋಟೋಗಳನ್ನು ಮುದ್ರಿಸಲಾಗಿದೆ. ಸ್ಥಳೀಯರಿಗೆ ಸುಲಭವಾಗಿ ಅರ್ಥವಾಗಲಿ ಎಂದು ಭಯೋತ್ಪಾದಕರನ್ನು ಪತ್ತೆಹಚ್ಚುವಲ್ಲಿ ಸಹಾಯ ಮಾಡಿ ಎಂದು ಉರ್ದು ಭಾಷೆಯಲ್ಲಿ ಮಾಹಿತಿ ಪ್ರಕಟಿಸಲಾಗಿದೆ.
“ಅಮಾಯಕರನ್ನು ಕೊಂದವರಿಗೆ ನಮ್ಮ ದೇಶದಲ್ಲಿ ಸ್ಥಾನವಿಲ್ಲ” ಎಂದು ಅದರ ಮೇಲೆ ಬರೆಯಲಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರನ್ನು ಹುಡುಕಿ ಕೊಟ್ಟರೆ, ಅವರ ಬಗ್ಗೆ ಮಾಹಿತಿ ನೀಡುವವರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಜಮ್ಮು-ಕಾಶ್ಮೀರ ಪೊಲೀಸರು ಪೋಸ್ಟರ್ನಲ್ಲಿ ಘೋಷಿಸಿದ್ದಾರೆ.
ದಾಳಿಕೋರರು:
ಪೋಸ್ಟರ್ಗಳಲ್ಲಿ ಮುದ್ರಿಸಲಾದ ಉಗ್ರರನ್ನು ಆಸಿಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಪಾಕಿಸ್ತಾನಿಗಳು. ಈ ರಕ್ತಪಿಪಾಸುಗಳು ಮೂಸಾ, ಯೂನಸ್ ಮತ್ತು ಆಸಿಫ್ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಾರೆ. ಈ ಹಿಂದೆ ಪೂಂಚ್‌ನಲ್ಲಿ ನಡೆದ ಭಯೋತ್ಪಾದನೆ ದಾಳಿಯಲ್ಲೂ ಇವರು ಭಾಗಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.