ಬಳ್ಳಾರಿಯ ಕೆಐಎಡಿಬಿ ಕಚೇರಿಯಲ್ಲಿ 16 ಕೋಟಿ ರೂ.ಗೂ ಅವ್ಯವಹಾರ ನಡೆದಿದ್ದು, ನಾಲ್ಕು ವರ್ಷಗಳಲ್ಲಿ ಅಧಿಕಾರಿಗಳ ನಕಲಿ ಸಹಿ ಬಳಸಿ ಹಣ ಅಕ್ರಮ ವರ್ಗಾವಣೆ ಆಗಿದೆ ಎಂದು ಆರೋಪಿಸಿ ಏಳು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಆಂತರಿಕ ಆಡಿಟ್ ಮೂಲಕ ಈ ಹಗರಣ ಪತ್ತೆಯಾಗಿದ್ದು, ಸಿಐಡಿಗೆ ಪ್ರಕರಣ ವರ್ಗಾವಣೆಯಾಗುವ ಸಾಧ್ಯತೆಯಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಕೆಐಎಡಿಬಿ ಬಳ್ಳಾರಿ ವಲಯ ಕಚೇರಿಯಲ್ಲಿ ಈ ಬೃಹತ್ ಆರ್ಥಿಕ ಅವ್ಯವಹಾರ ಬೆಳಕಿಗೆ ಬಂದಿದೆ. ಈ ವರ್ಷದ ಆಂತರಿಕ ಆಡಿಟ್ ವೇಳೆ 16 ಕೋಟಿ ರೂ.ಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಮಂಡಳಿಯ ಎಕ್ಯೂಟಿವ್ ಇಂಜಿನಿಯರ್ ಪೊಲೀಸರಿಗೆ ದೂರು ನೀಡಿದ ಆಧಾರದಲ್ಲಿ ಏಳು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
2022ರಿಂದ 2026ರವರೆಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 16 ಕೋಟಿ 17 ಲಕ್ಷ ರೂ. ಅಕ್ರಮವಾಗಿ ವರ್ಗಾವಣೆ ಆಗಿದ್ದು, ಪ್ರಕರಣದಲ್ಲಿ ಕೆಐಎಡಿಬಿ ಗುತ್ತಿಗೆ ನೌಕರ ಸಂತೋಷ್ ಕುಮಾರ್, ಖಾಸಗಿ ಬ್ಯಾಂಕ್ ಮ್ಯಾನೇಜರ್ ಸೇರಿ ಏಳು ಜನರ ವಿರುದ್ಧ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಸಂತೋಷ್ ಕುಮಾರ್ ಪರಾರಿಯಾಗಿದ್ದಾನೆ.
ಆರೋಪಿಯು ಅಧಿಕಾರಿಗಳ ನಕಲಿ ಸಹಿ ಮಾಡಿ ಚೆಕ್ ಮೂಲಕ ಹಣವನ್ನು ಹಲವು ಬಾರಿ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರತಿ ವರ್ಷವೂ ಆಡಿಟ್ ನಡೆದಿದ್ದರೂ ನಾಲ್ಕು ವರ್ಷಗಳ ಬಳಿಕ ಈ ಅವ್ಯವಹಾರ ಬೆಳಕಿಗೆ ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಆರೋಪಿಗಳ ಪತ್ತೆ ಕಾರ್ಯ ಚಾಲ್ತಿಯಲ್ಲಿದೆ ಎಂದು ಬಳ್ಳಾರಿ ಎಸ್ಪಿ ಸುಮನ್ ಪನ್ನೇಕರ್ ತಿಳಿಸಿದ್ದಾರೆ.


