ಕೊಪ್ಪಳದಲ್ಲಿ ಲೋಕಾಯುಕ್ತ ದಾಳಿ ವೇಳೆ 10 ಕೋಟಿ ರೂ. ಭ್ರಷ್ಟಾಚಾರ ಬಯಲಿಗೆ ಬಂದ ಹಿನ್ನೆಲೆ ಕೊಪ್ಪಳ ನಗರಸಭೆಯ ಜೆಇ ಸೋಮಲಿಂಗಪ್ಪ ಅವರನ್ನು ಅಮಾನತು ಮಾಡಲಾಗಿದೆ.
2023-24 ಹಾಗೂ 24-25ನೇ ಸಾಲಿನ ಕಾಮಗಾರಿಗಳಲ್ಲಿ ಸುಳ್ಳು ಬಿಲ್ ಹಾಕಿದ್ದು, ಒಟ್ಟು 366 ಕಾಮಗಾರಿಗಳಲ್ಲಿ 10 ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾರೆ. ಈ ಹಿಂದೆ ಲೋಕಾಯುಕ್ತ ದಾಳಿ ನಡೆಸಿದಾಗ ವಿಚಾರ ಪತ್ತೆಯಾಗಿತ್ತು. ಪೌರಾಡಳಿತ ಇಲಾಖೆ ನಿರ್ದೇಶಕರು ಕೊಪ್ಪಳ ನಗರಸಭೆಯ ಜೆಇ ಸೋಮಲಿಂಗಪ್ಪ ಅವರನ್ನು ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿ ಲೋಕಾಯುಕ್ತ ಬಲೆಗೆ
ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮದ ಬಿಲ್ ಪಾವತಿಸಲು ಎನ್ಜಿಒ ಅಧ್ಯಕ್ಷರಿಂದ ಲಂಚ ಸ್ವೀಕರಿಸುತ್ತಿದ್ದ ಲೆಕ್ಕಪತ್ರ ವ್ಯವಸ್ಥಾಪಕ ಅರವಿಂದ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
2025-26ರ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಜಿಲ್ಲೆಯ 10 ತಾಲೂಕುಗಳ ಜಾತ್ರೆ ಮತ್ತು ಸಂತೆಗಳಲ್ಲಿ ಆರೋಗ್ಯ ಜಾಗೃತಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಜಿಲ್ಲೆಯ ಹತ್ತು ತಾಲೂಕುಗಳಲ್ಲಿ ಜಾತ್ರೆ, ಸಂತೆಗಳಲ್ಲಿ ಆರೋಗ್ಯ ಕುರಿತ ವಸ್ತು ಪ್ರದರ್ಶನ ಮಾಡಲಾಗಿತ್ತು. ಕಾರ್ಯಕ್ರಮ ನಡೆಸಿದ್ದ ಎನ್ಜಿಒಗೆ ಬರಬೇಕಿದ್ದ 1.98 ಲಕ್ಷ ರೂ. ಬಿಲ್ ಪಾವತಿಸಲು ಅರವಿಂದ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಿಲ್ ಬಿಡುಗಡೆ ಮಾಡಲು ಅರವಿಂದ್ 12 ಸಾವಿರ ರೂ. ಲಂಚ ಕೇಳಿದ್ದರು. ಎನ್ಜಿಒ ಅಧ್ಯಕ್ಷ ರಾಜಶೇಖರ್ ಲಂಚ ನೀಡಲು ನಿರಾಕರಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರಿನ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಸಂಜೆ 4:10ಕ್ಕೆ ಕಚೇರಿ ಕಾಂಪೌಂಡ್ ಒಳಗೆ ರಾಜಶೇಖರ್ ಅವರಿಂದ 12 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಅರವಿಂದ್ ಅವರನ್ನು ಬಂಧಿಸಿದ್ದಾರೆ.


