ಬೆಂಗಳೂರು ನಗರದ ಥಣಿಸಂದ್ರ ವ್ಯಾಪ್ತಿಯ ಅಮರಜ್ಯೋತಿ ಲೇಔಟ್‌ನಲ್ಲಿ ರೌಡಿಶೀಟರ್‌ನನ್ನು ಆತನ ತಾಯಿಯ ಕಣ್ಣೆದುರೇ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿರುವ ಘಟನೆ ನಡೆದಿದೆ.
ಡಿಜೆ ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಪವನ್ ಕುಮಾರ್ (25) ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮೂರು ಬೈಕ್‌ಗಳಲ್ಲಿ ಆರು ಆರೋಪಿಗಳು ಹೆಲ್ಮೆಟ್ ಧರಿಸಿಕೊಂಡು ಬಂದಿದ್ದು, ಪವನ್ ಮನೆಗೆ ಬಂದು ನಿಂತ ತಕ್ಷಣವೇ ತಾಯಿಯ ಎದುರಲ್ಲೇ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಸಂಪಿಗೆಹಳ್ಳಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಪವನ್ ಕುಮಾರ್ ಹಿಂದೆ ಕೊಲೆ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿದ್ದ, ಕಳೆದ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಗೊಂಡು ಮನೆಗೆ ಮರಳಿದ್ದ. ಆತ ಬದಲಾಗಲಿ ಎಂಬ ಕಾರಣಕ್ಕೆ ಒಂದೂವರೆ ತಿಂಗಳ ಹಿಂದೆ ಮನೆ ಸಮೀಪವೇ ಕುಟುಂಬದವರು ಬೇಕರಿ ಉದ್ಯಮ ನಡೆಸಲು ಅಂಗಡಿ ತೆರೆದು ಕೊಟ್ಟಿದ್ದರು.
ಮೂರು ವರ್ಷದ ಹಿಂದೆ ಕಪಿಲ ಎಂಬಾತನ ಕೊಲೆಗೆ ಪ್ರತೀಕಾರವಾಗಿ ಪವನ್ ಕುಮಾರ್ ಕೊಲೆ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಕಪಿಲನ ಕೊಲೆ ಮಾಡುವಾಗಲೂ ಆರು ಜನ ಹೆಲ್ಮೆಟ್ ಹಾಕಿಕೊಂಡು ಬಂದಿದ್ದರು.
ಕಪಿಲನ ತಮ್ಮ ಪ್ರೇಮ್ ಎಂಬಾತ ನನ್ನನ್ನು ಹೊಡೆಸಲು ಯತ್ನಿಸುತ್ತಿದ್ದಾನೆ ಎಂದು ಪವನ್ ಕುಮಾರ್ ಕೆಲವು ದಿನಗಳ ಹಿಂದೆ ತಾಯಿಯ ಬಳಿ ಆತಂಕ ವ್ಯಕ್ತಪಡಿಸಿದ್ದ ಎಂದು ತಿಳಿದುಬಂದಿದೆ.


