ಮುಂಬೈ: ಮಧ್ಯಮ ವೇಗಿ ಟ್ರೆಂಟ್ ಬೌಲ್ಟ್ ಮಾರಕ ದಾಳಿ ಹಾಗೂ ರೋಹಿತ್ ಶರ್ಮ ಸಿಡಿಸಿದ ಸತತ ಎರಡನೇ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ 7 ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿಸಿಕೊಂಡಿದೆ.
ಹೈದರಾಬಾದ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 20 ಓವರ್ ಗಳಲ್ಲಿ 8 ವಿಕೆಟ್ ಗೆ 143 ರನ್ ಗಳಿಗೆ ನಿಯಂತ್ರಿಸಿದ ಮುಂಬೈ ಇಂಡಿಯನ್ಸ್ 15.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ 9 ಪಂದ್ಯಗಳಿಂದ 5 ಜಯ ಹಾಗೂ 4 ಸೋಲಿನೊಂದಿಗೆ 10 ಅಂಕ ಸಂಪಾದಿಸಿ ಮೂರನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ 8 ಪಂದ್ಯಗಳಲ್ಲಿ 2 ಜಯ ಹಾಗೂ 6 ಸೋಲಿನೊಂದಿಗೆ 4 ಅಂಕದೊಂದಿಗೆ ಪ್ಲೇ ಆಫ್ ರೇಸ್ ನಿಂದ ಬಹುತೇಕ ಹೊರಬಿದ್ದಿತು.
ರೋಹಿತ್ ಶರ್ಮ ಸತತ 2ನೇ ಅರ್ಧಶತಕ ಬಾರಿಸಿ ಗಮನ ಸೆಳೆದರು. ಅಲ್ಲದೇ ಟಿ-20ಯಲ್ಲಿ 12 ಸಾವಿರ ರನ್ ಪೂರೈಸಿದ ದಾಖಲೆಗೆ ಪಾತ್ರರಾದರು.
ರೋಹಿತ್ 46 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 70 ರನ್ ಬಾರಿಸಿ ಔಟಾದರು, ವಿಲ್ ಜಾಕ್ಸ್ (22) ಮತ್ತು ಸೂರ್ಯಕುಮಾರ್ ಯಾದವ್ (ಅಜೇಯ 40 ರನ್, 19 ಎಸೆತ, 5 ಬೌಂಡರಿ, 2 ಸಿಕ್ಸರ್) ಉತ್ತಮ ಕಾಣಿಕೆ ನೀಡಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ವೇಗಿ ಟ್ರೆಂಟ್ ಬೌಲ್ಟ್ ಮಾರಿಕ ದಾಳಿಗೆ ತತ್ತರಿಸಿ ಬೃಹತ್ ಮೊತ್ತ ಪೇರಿಸುವಲ್ಲಿ ಎಡವಿತು. ಒಂದು ಹಂತದಲ್ಲಿ ತಂಡ 35 ರನ್ ಗೆ 5 ವಿಕೆಟ್ ಕಳೆದುಕೊಂಡು ತತ್ತರಿಸಿತು. ಈ ಹಂತದಲ್ಲಿ ಜೊತೆಯಾದ ಹೆನ್ರಿಚ್ ಕ್ಲಾಸೆನ್ ಮತ್ತು ಕನ್ನಡಿಗ ಅಭಿನವ್ ಮನೋಹರ್ 6ನೇ ವಿಕೆಟ್ ಗೆ 99 ರನ್ ಜೊತೆಯಾಟದಿಂದ ತಂಡವನ್ನು ಕಳಪೆ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರು ಮಾಡಿದರು.
ಕ್ಲಾಸೆನ್ 44 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 72 ರನ್ ಸಿಡಿಸಿದರೆ, ಅಭಿನವ್ ಮನೋಹರ್ 37 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 43 ರನ್ ಗಳಿಸಿದರು. ಇವರಿಬ್ಬರು ಔಟಾಗುತ್ತಿದಂತೆ ತಂಡ ಮತ್ತೊಮ್ಮೆ ಕುಸಿತ ಕಂಡಿತು.
ಟ್ರೆಂಟ್ ಬೌಲ್ಟ್ 26 ರನ್ ಗೆ 4 ವಿಕೆಟ್ ಪಡೆದು ಮಿಂಚಿದರು. ದೀಪಕ್ ಚಾಹರ್ 2 ವಿಕೆಟ್ ಗಳಿಸಿದರು.