ಹುಬ್ಬಳ್ಳಿ:ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ನಿವಾಸದ ಬಳಿಯ ಮನೆಯೊಂದಕ್ಕೆ ನುಗ್ಗಿ ಲೂಟಿ ಮಾಡಿದ್ದ ಇಬ್ಬರು ದರೋಡೆಕೋರರಿಗೆ ಗುಂಡು ಹೊಡೆದು ಬಂಧಿಸಿರುವ ನಗರ ಪೊಲೀಸರು ಮತ್ತೋರ್ವನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಇರ್ಷಾದ್, ಅಕ್ಬರ್, ಶಂಷಾದ್ ಖುರೇಷಿ ಗುಂಡೇಟು ತಿಂದು ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ,ಇವರಿಬ್ಬರು,ಕಳೆದ ಮಾ. 1ರಂದು ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಭಾಪತಿ ಬಸವರಾಜ್ ಹೊರಟ್ಟಿ ಮನೆಯ ಪಕ್ಕದಲ್ಲಿಯೇ ಮನೆ ದರೋಡೆ ಮಾಡಿ ದರೋಡೆಕೋರರು ಪರಾರಿಯಾಗಿದ್ದರು.
ಆರೋಪಿಗಳನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ದರೋಡೆಕೋರರ ಮೇಲೆ ಪೊಲೀಸರು ಪೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ ಮೂರು ಜನ ಪೊಲೀಸ್ ಸಿಬ್ಬಂದಿಗಳಿಗೆ ಗಾಯವಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಗಳು ಹಾಗೂ ಇಬ್ಬರು ಆರೋಪಿಗಳನ್ನು ಚಿಕಿತ್ಸೆಗಾಗಿ ಕಿಮ್ಸ್ಗೆ ದಾಖಲು ಮಾಡಲಾಗಿದೆ.
ಪ್ರಕರಣದ ಸಂಬಂಧ ಮಾಹಿತಿಯನ್ನು ನೀಡಿದ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಇದೇ ತಿಂಗಳ 1ರಂದು ಅಪಾರ್ಟ್ಮೆಂಟ್ ಕಳ್ಳತನವಾಗಿತ್ತು. ಸುಮಾರು 20 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿತ್ತು. ಹಿಂದೆ ವಿದ್ಯಾಗಿರಿ, ಧಾರವಾಡ ಶಹರ, ಕೇಶ್ವಾಪುರ ಠಾಣೆಯಲ್ಲಿ ಇದೇ ಮಾದರಿಯಲ್ಲಿ ದರೋಡೆ ಪ್ರಕರಣ ಇರುವುದು ಕಂಡು ಬಂದಿದೆ.
ಹುಡುಕಲು ಹೊರಟಾಗ ಈ ಗ್ಯಾಂಗ್ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಆಕ್ಟೀವ್ ಆಗಿತ್ತು. ದೊಡ್ಡ ದೊಡ್ಡ ಕಾರ್ ನಲ್ಲಿ ಸುತ್ತಾಡೋದು, ಪ್ರತಿಷ್ಠಿತ ಹೋಟೆಲ್ಗಳಲ್ಲಿ ದರೋಡೆಕೋರರು ಉಳಿದುಕೊಳ್ಳುತ್ತಿದ್ದರು. ಪ್ರಮುಖ ನಗರದಲ್ಲಿನ ಶ್ರೀಮಂತರು ಹೆಚ್ಚಾಗಿರುವ ಏರಿಯಾಗಳಲ್ಲಿ ಓಡಾಟ ಮಾಡಿ ಕಳ್ಳತನ ಮಾಡುವ ಮನೆ ಗುರುತಿಸಿ ಬಳಿಕ ಪ್ಲಾನ್ ಮಾಡಿ ಮನೆ ಕಳ್ಳತನ ಮಾಡುತ್ತಿದ್ದರು. ಕರ್ನಾಟಕ, ಆಂಧ್ರಪ್ರದೇಶದ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಕ್ಕೆ ಬೇಕಾದ ನಟೋರಿಯಸ್ ದರೋಡೆಕೋರರು ಇವರಾಗಿದ್ದು , 15 ರಿಂದ 20 ಜನ ಈ ತಂಡದಲ್ಲಿದ್ದಾರೆ.
ಈ ದರೋಡೆಕೋರನನ್ನು ಟ್ರ್ಯಾಕ್ ಮಾಡಿದಾಗ ಶಿವಮೊಗ್ಗದಲ್ಲಿ ಇರುವುದು ಕಂಡುಬಂತು. ನಂತರ ಹುಬ್ಬಳ್ಳಿಯತ್ತ ಬರುತ್ತಿರುವ ಮಾಹಿತಿ ಲಭ್ಯವಾಯಿತು. ಆರೋಪಿಗಳು ಮತ್ತೆ ಹುಬ್ಬಳ್ಳಿಯ ಮಾರುತಿ ಎನ್ನುವವನ ಮೇಲೆ ಹಲ್ಲೆ ಮಾಡಿ ಬೈಕ್ ಕಸಿದುಕೊಂಡು ಪರಾರಿಯಾಗಿದ್ದರು.
ದರೋಡೆಕೋರು ಹುಬ್ಬಳ್ಳಿ ಹೊರವಲಯದ ರಾಯನಾಳ ಸಮೀಪದಲ್ಲಿ ದರೋಡೆಗಾಗಿ ಅಡಗಿ ಕುಳಿತಿರುವುದು ತಿಳಿದು ಬಂದಿತ್ತು. ನಮ್ಮ ಸಿಬ್ಬಂದಿ ಹಿಡಿಯಲು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಕಣ್ಣಿಗೆ ಖಾರದಪುಡಿ ಎರಚಿ ಹಲ್ಲೆ ಮಾಡಿ ಪರಾರಿಯಾಗಲು ಪ್ರಯತ್ನ ಮಾಡಿದ್ದರು. ಆತ್ಮರಕ್ಷಣೆಗಾಗಿ ಪೊಲೀಸರು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಬಳಿಕ ಇಬ್ಬರು ದರೋಡೆಕೋರರ ಕಾಲಿಗೆ ಗುಂಡು ಹಾರಿಸಿದ್ದಾರೆ. ದಾಳಿ ವೇಳೆಯಲ್ಲಿ ಓರ್ವ ಆರೋಪಿ ಪರಾರಿಯಾಗಿದ್ದ. ಸದ್ಯ ಪರಾರಿಯಾಗಿದ್ದ ಆರೋಪಿ ಶಂಷಾದ್ ಖುರೇಷಿಯನ್ನು ಸಹ ಬಂಧಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಸಾಕ್ಷಿ ನಾಶಕ್ಕೆ ಕಾರಿಗೆ ಬೆಂಕಿ:
ಈ ನಟೋರಿಯಸ್ ದರೋಡೆಕೋರರು ಕೃತ್ಯಕ್ಕೆ ಬಳಿಸಿದ ಕಾರುಗಳು ಹಾಗೂ ಬೈಕ್ನ್ನು ನಾಶಪಡಿಸುವುದಾಗಿ ಆರೋಪಿಯೊಬ್ಬ ಬಾಯಿ ಬಿಟ್ಟಿದ್ದ. ಅದರಂತೆ ರಾಯನಾಳ ಕ್ರಾಸ್ ಬಳಿ ಕಾರಿಗೆ ಬೆಂಕಿ ಹಚ್ಚಿದ್ದು, ತಪ್ಪಿಸಿಕೊಂಡು ಹೋಗಿದ್ದ ಆರೋಪಿಯೊಬ್ಬ ಈ ಕಾರಿಗೆ ಬೆಂಕಿ ಹಚ್ಚಿರಬಹುದೆಂಬ ಅನುಮಾನವಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.