ಬೆಂಗಳೂರು:ಚಿನ್ನದ ಅಂಗಡಿಯಲ್ಲಿ ಹಾಲ್ ಮಾರ್ಕ್ ಹಾಕುವ ಕೆಲಸ ಮಾಡಿಕೊಂಡು ನಂಬಿಕೆ ಗಳಿಸಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಕೆಲಸಗಾರ ಹಾಗೂ ಆತನ ಸ್ನೇಹಿತ ಸೇರಿ ಇಬ್ಬರನ್ನು ಬಂಧಿಸಿರುವ ಹಲಸೂರು ಗೇಟ್ ಪೊಲೀಸರು 63 ಲಕ್ಷ ಮೌಲ್ಯದ
727 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.
ರಾಜಸ್ಥಾನದ ಬೇವಾರ್ ಜಿಲ್ಲೆಯ ಶಿವಾಜಿನಗರದ ಮನೀಶ್ ಪ್ರಜಾಪತ್(20) ಛತ್ತರಪುರದ ಮಹಾವೀರ್ ಗುರ್ಜರ್ ಅಲಿಯಾಸ್ ಡಾನ್ ಗುಜ್ಜರ್(22) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಿಂದ 727 ಗ್ರಾಂ 63 ಲಕ್ಷ ಮೌಲ್ಯದ
727 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ,ಆರೋಪಿ ಮನೀಶ್ ಪ್ರಜಾಪತ್ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ,ಮತ್ತೊಬ್ಬ ಆರೋಪಿ ಗುರ್ಜರ್ ಹೂವಿನ ವ್ಯಾಪಾರ ಮಾಡುತ್ತಿದ್ದು, ಹಣದಾಸೆಯಿಂದ ಮೊದಲ ಬಾರಿ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.
ಹಲಸೂರು ಗೇಟ್ ನಗರತ್ ಪೇಟ್ ಕ್ರಾಸ್, ಕೆಂಪಣ್ಣ ಲೇನ್‍ನಲ್ಲಿ ಶರ್ಮಿಳಾ ಅವರು ನಡೆಸುತ್ತಿದ್ದ ಕೊನಾರ್ಕ್ ಹಾಲ್ ಮಾರ್ಕಿಂಗ್ ಅಂಡ್ ಅಸ್ಸೆ ಸೆಂಟರ್ ಅಂಗಡಿಯಲ್ಲಿ ಚಿನ್ನದ ಆಭರಣಗಳ ಪರಿಶುದ್ದತೆ ಪರೀಕ್ಷೆ ಮಾಡಿ ಹಾಲ್ ಮಾರ್ಕ್ ಹಾಕುವ ಕೆಲಸ ಮಾಡಿಕೊಂಡಿದ್ದ ಆರೋಪಿ ಮನೀಶ್ ಪ್ರಜಾಪತ್ ಆರು ತಿಂಗಳಿನಿಂದ ಕೆಲಸ ಮಾಡಿ ನಂಬಿಕೆ ಗಳಿಸಿದ್ದ.
ಅಂಗಡಿಯಲಿದ್ದ ಟೇಬಲ್ ಡ್ರಾವರ್ ನಲ್ಲಿಟ್ಟಿದ್ದ ಲಾಕರ್ ಬೀಗದ ಕೀಯನ್ನು ತೆಗೆದು ಲಾಕರ್ ನಲ್ಲಿಟ್ಟಿದ್ದ ಎರಡು ಜ್ಯೂವೆಲರ್ಸ್ ಶಾಪ್‍ನವರು ಹಾಲ್ ಮಾರ್ಕ್ ಹಾಕಲು ನೀಡಿದ್ದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ.
ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆ ಹಾಕಿ, ಮೆಜೆಸ್ಟಿಕ್ ಬಳಿ ಆರೋಪಿಯನ್ನು ಬಂಧಿಸಿ ಸುದೀರ್ಘ ವಿಚಾರಣೆ ನಡೆಸಿದಾಗ ಕಳವು ಮಾಡಿದ್ದ ಚಿನ್ನಾಭರಣಗಳನ್ನು ರಾಜಸ್ಥಾನ ರಾಜ್ಯದ ಬೆವಾರ್ ಜಿಲ್ಲೆಯಲ್ಲಿ ವಾಸವಿದ್ದ ಆರೋಪಿಯ ಸ್ನೇಹಿತ ಗುರ್ಜರ್ ಗೆ ಮಾರಾಟ ಮಾಡುವ ಸಲುವಾಗಿ ನೀಡಿರುವುದಾಗಿ ತಿಳಿಸಿರುವುದನ್ನು ಬಾಯ್ಬಿಟ್ಟಿದ್ದ.
ಈ ಮಾಹಿತಿಯನ್ನಾಧರಿಸಿ ಬೆವಾರ್ ಜಿಲ್ಲೆ, ಸಾಕೆತ್ ನಗರಕ್ಕೆ ತೆರಳಿ ಕಾರ್ಯಾಚರಣೆ ಕೈಗೊಂಡು ಅಲ್ಲಿನ ಆದರ್ಶ ವಿದ್ಯಾ ಮಂದಿರ್ ಶಾಲೆ ಬಳಿ ಗುರ್ಜರ್ ನನ್ನು ಬಂಧಿಸಿ ಆತ ರಾಜ್ಯದ ವಿವಿಧ ಜಿಲ್ಲೆಗಳ ಚಿನ್ನದ ಅಂಗಡಿಗಳಲ್ಲಿ ಮಾರಾಟ ಮಾಡಿದ್ದ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್.ಟಿ ನೇತೃತ್ವದ ಹಲಸೂರುಗೇಟ್ ಪೊಲೀಸ್ ಇನ್ಸ್‌ಪೆಕ್ಟರ್ ಹನಮಂತ ಕೆ ಭಜಂತ್ರಿ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.