ಬೆಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ದರೋಡೆಕೋರ ಅಣ್ಣನನ್ನು ನೋಡಲು ಜೈಲಿಗೆ ಭೇಟಿ ನೀಡಿದಾಗ ಕೃತಕ ಬುದ್ಧಿಮತ್ತೆ ( ಎಐ) ಪವರ್ಡ್ ಫೇಸ್ ರೆಕಗ್ನಿಷನ್ ಕ್ಯಾಮೆರಾದಿಂದ ಪೊಲೀಸರ ಅತಿಥಿಯಾಗಿದ್ದಾನೆ!
ಡಕಾಯತಿ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಅಫ್ರೋಜ್ ಪಾಶಾನನ್ನು ಎಐ ಪವರ್ಡ್ ಫೇಸ್ ರೆಕಗ್ನಿಷನ್ ಕ್ಯಾಮೆರಾದಿಂದ ಮಡಿವಾಳ ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ತನ್ನ ಸಹೋದರನನ್ನ ಭೇಟಿಯಾಗಲು ತೆರಳಿದ್ದ ಅಫ್ರೋಜ್ ಪಾಶಾನ ಕುರಿತು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಆತನನ್ನ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ದಯಾನಂದ ತಿಳಿಸಿದ್ದಾರೆ.
10 ವರ್ಷಗಳ ಹಿಂದೆ ಮಡಿವಾಳ ಠಾಣೆಯಲ್ಲಿ ದಾಖಲಾಗಿದ್ದ ಡಕಾಯಿತಿ ಪ್ರಕರಣದಲ್ಲಿ ಜೈಲು ಸೇರಿದ್ದ ಅಫ್ರೋಜ್ ಪಾಶಾ, ಜಾಮೀನು ಪಡೆದುಕೊಂಡಿದ್ದರು. ನಂತರ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಅಫ್ರೋಜ್ ಪಾಶಾನ ಬಂಧನಕ್ಕೆ ಹಲವು ಬಾರಿ ವಾರಂಟ್ ಜಾರಿಯಾಗಿತ್ತು.
ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದರೂ ಸಹ ಸಿಕ್ಕಿರಲಿಲ್ಲ. ಈ ನಡುವೆ ಪ್ರಕರಣವೊಂದರಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆತನ ಸಹೋದರನನ್ನ ಭೇಟಿಯಾಗಲು ಅಫ್ರೋಜ್ ಪಾಶಾ ಬಂದಿದ್ದ. ಅದೇ ಸಂದರ್ಭದಲ್ಲಿ ಜೈಲಿನಲ್ಲಿ ಪೊಲೀಸ್ ಇಲಾಖೆಯಿಂದ ಅಳವಡಿಸಲಾಗಿದ್ದ ಎಐ ಪವರ್ಡ್ ಫೇಸ್ ರೆಕಗ್ನಿಷನ್ ಕ್ಯಾಮೆರಾದಲ್ಲಿ ಅಫ್ರೋಜ್ನ ಮುಖ ಸೆರೆಯಾಗಿತ್ತು.
ಸಾಮಾನ್ಯವಾಗಿ ಎಐ ಪವರ್ಡ್ ಫೇಸ್ ರೆಕಗ್ನಿಷನ್ ಕ್ಯಾಮೆರಾದ ಮೂಲಕ ವ್ಯಕ್ತಿಯ ವಿವರ, ಯಾವುದಾದರೂ ಪ್ರಕರಣದಲ್ಲಿ ವಾಂಟೆಡ್ ಇರುವವರಾ? ಅಥವಾ ಅಪರಾಧಿಕ ಹಿನ್ನೆಲೆಗಳಿವೆಯಾ ಎಂದು ತಿಳಿಯುತ್ತದೆ.
ಅದೇ ರೀತಿ ಅಫ್ರೋಜ್ ಪಾಶಾನ ಮುಖ ಸ್ಕ್ಯಾನ್ ಆಗುತ್ತಿದ್ದಂತೆ ಆತನ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿರುವ ವಿಚಾರ ತಿಳಿದ ಸಿಐಎಸ್ಎಫ್ ಅಧಿಕಾರಿಗಳು, ತಕ್ಷಣವೇ ಮಡಿವಾಳ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತೆರಳಿದ ಮಡಿವಾಳ ಠಾಣೆ ಪೊಲೀಸರು ಆರೋಪಿ ಬಂಧಿಸಿದ್ದಾರೆ.