ಹಾವೇರಿ: ಸಾಮೂಹಿಕ ಅತ್ಯಾಚಾರ ಆರೋಪಿಗಳು ನ್ಯಾಯಾಲಯ ಜಾಮೀನು ನೀಡಿದ ಖುಷಿಯಲ್ಲಿ ಜೈಲಿನಿಂದ ಕಾರಿನಲ್ಲಿ ಮೆರವಣಿಗೆ ಮೂಲಕ ಸಂಭ್ರಮ ಆಚರಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಸಬ್ ಜೈಲ್ ನಿಂದ ಹಾನಗಲ್ ತಾಲೂಕಿನ ಅಕ್ಕಿ ಆಲೂರು ವರೆಗೆ ಸುಮಾರು 5 ಕಾರುಗಳಲ್ಲಿ ಸುಮಾರು 20 ಮಂದಿ ಹಿಂಬಾಲಕರ ಜೊತೆ ಆರೋಪಿಗಳು ರೋಡ್ ಶೋ ಮೂಲಕ ಸಂಭ್ರಮ ಆಚರಿಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
3 ದಿನಗಳ ಹಿಂದೆ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ 7 ಆರೋಪಿಗಳಿಗೆ ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಸಂತ್ರಸ್ತೆ ಆರೋಪಿಗಳನ್ನು ಗುರುತಿಸಲು ವಿಫಲವಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಎ1 ಆರೋಪಿ ಅಪ್ತಾಬ್ ಚಂದನಕಟ್ಟಿ, ಎ2 ಮದರ್ ಸಾಬ್ ಮಂಡಕ್ಕಿ, ಎ3 ಸಮಿವುಲ್ಲಾ ಲಾಲನವರ, ಎ4 ಮಹಮದ್ ಸಾದಿಕ್ ಅಗಸಿಮನಿ, ಎ8 ಶೊಯಿಬ್ ಮುಲ್ಲಾ, ಎ11 ತೌಸಿಪ್ ಚೋಟಿ, ಎ13 ರಿಯಾಜ್ ಸಾವಿಕೇರಿಗೆ ಜಾಮೀನು ಮಂಜೂರು ಮಾಡಿದೆ.
ಜಾಮೀನು ದೊರೆತ ಬೆನ್ನಲ್ಲೇ ಆರೋಪಿಗಳು ಜೈಲಿನಿಂದ ಬಿಡುಗಡೆ ಆಗಿದ್ದು, ಜೈಲಿನಿಂದಲೇ ಕಾರಿನ ಮೂಲಕ ಸಂಭ್ರಮ ಆಚರಣೆ ಮಾಡಿದ ಆರೋಪಿಗಳು ದಾರಿಯುದ್ದಕ್ಕೂ ಕೂಗಾಡಿರುವ ವೀಡಿಯೋಗಳು ವೈರಲ್ ಆಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ಆರೋಪಿಗಳ ಅಟ್ಟಹಾಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.