ಬೆಂಗಳೂರು ಸಂಚಾರ ಪೊಲೀಸರು ಸಿದ್ಧಪಡಿಸಿರುವ ರಸ್ತೆ ಸಂಚಾರ ನಿಯಮಗಳ ಕುರಿತ ಅಧ್ಯಾಯಗಳನ್ನು ಶಾಲಾ ಪಠ್ಯದಲ್ಲಿ ಅಳವಡಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಅಸ್ತು ಎಂದಿದೆ.
ಬೆಂಗಳೂರು ಸಂಚಾರ ಪೊಲೀಸರು ಈ ಸಂಬಂಧ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ 2 ರಿಂದ 7ನೇ ತರಗತಿ ಹಾಗೂ 9ನೇ ತರಗತಿಗಳ 2025-26ನೇ ಸಾಲಿನ ಪಠ್ಯದಲ್ಲಿ ಸಂಚಾರ ನಿಯಮಗಳ ಕುರಿತು ಅಳವಡಿಸಲು ಸಮ್ಮತಿ ನೀಡಲಾಗಿದೆ.
ಸಂಚಾರ, ಸೂಚನಾ ಫಲಕಗಳು, ನಿಯಮಗಳು, ವೈಯಕ್ತಿಕ ಸುರಕ್ಷತೆ, ರಸ್ತೆ ಸುರಕ್ಷತೆ, ರಸ್ತೆ ಸುರಕ್ಷತೆ ಎಲ್ಲರ ಸುರಕ್ಷತೆ ಹೆಸರಿನ ಅಧ್ಯಾಯಗಳನ್ನು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಸಿದ್ಧಪಡಿಸಿದೆ. ಪಠ್ಯಪುಸ್ತಕ ರಚನೆ ಅಥವಾ ಪರಿಷ್ಕರಣೆ ಸಮಯದಲ್ಲಿ ಸಮಿತಿ ಅಧ್ಯಕ್ಷರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಪಠ್ಯ ಪುಸ್ತಕ ಸಂಘ ಹೇಳಿದೆ.