ಚಿತ್ರದುರ್ಗದ ಹಿರಿಯೂರು ತಾಲೂಕಿನ ಇಂಡಸ್ ಕಟ್ಟೆಯಲ್ಲಿ ಕಬ್ಬಿಣ ತುಂಬಿದ ಲಾರಿಗೆ ಹಿಂಬದಿಯಿಂದ ಕೋಳಿ ತುಂಬಿದ ಬುಲೆರೊ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತುಮಕೂರಿನ ತಿಪಟೂರು ನಿವಾಸಿಗಳಾದ ಚಂದನ್ ಗೌಡ( 22), ಕುಮಾರ್ (17) ಮೃತಪಟ್ಟವರು. ಬುಲೆರೊ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ..
ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪಿಎಸ್ಐ ಮಹೇಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಬಾಲಕ
ದಾವಣಗೆರೆ ನಗರದ ಮಾರ್ಕೆಟ್ ಸಮೀಪದ ರೈಲ್ವೆ ಬ್ರಿಡ್ಜ್ ಬಳಿ ಬಾಲಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕನಹಳ್ಳಿಯ ತರುಣ್ (16) ಅತ್ಮಹತ್ಯೆ ಮಾಡಿಕೊಂಡ ಬಾಲಕ.
ಏನೂ ಕೆಲಸ ಮಾಡದೆ ಮನೆಯಲ್ಲೇ ಇರುತ್ತಿದ್ದ ಬಾಲಕನಿಗೆ ಸುಮ್ಮನೆ ಹುಡುಗರ ಜೊತೆ ಸೇರಿ ಕೆಟ್ಟ ದಾರಿ ಹಿಡಿಯುವ ಬದಲು ಕೆಲಸಕ್ಕೆ ಹೋಗು ಎಂದು ಪೋಷಕರು ತಿಳುವಳಿಕೆ ಹೇಳಿದ್ದರು. ಇದರಿಂದ ಬೇಸತ್ತ ತರುಣ್ ಮನೆ ಬಿಟ್ಟು ಹೋಗಿದ್ದ.
ಕುಟುಂಬದವರು ಬಾಲಕನಿಗಾಗಿ ಹುಡುಕಾಟ ನಡೆಸಿದ್ದು, ಮರುದಿನ ಬೆಳಗ್ಗೆ ರೈಲುಹಳಿ ಮೇಲೆ ಮೃತದೇಹ ಪತ್ತೆಯಾಗಿದೆ. ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.


