ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್. ಗರುಡಾಚಾರ್ (96) ಶುಕ್ರವಾರ ಮುಂಜಾನೆ ನಿಧನರಾದರು. ಬೆಂಗಳೂರಿನ ಮೊದಲ ಪೊಲೀಸ್ ಕಮಿಷನರ್ ಸಿ.ಚಾಂಡಿ ಅವರ ಅಧಿಕಾರಾವಧಿಯಲ್ಲಿ ಬೆಂಗಳೂರು ಸಂಚಾರ ವಿಭಾಗದ ಡಿಸಿಪಿ ಆಗಿದ್ದ ಬಿ.ಎನ್ ಗರುಡಾಚಾರ್ ಅವರು ಮೊಟ್ಟ ಮೊದಲು ಎನ್.ಆರ್ ಜಂಕ್ಷನ್ (ಎಲ್ಐಸಿ ಕಚೇರಿ ಬಳಿ)ನಲ್ಲಿ 1963ರಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದ ಕಾರಣಕ್ಕೆ ಸಿಗ್ನಲ್ ಅಳವಡಿಸಿದ್ದರು.
ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಬಿ ಗರುಡಾಚಾರ್ ತಂದೆಯಾಗಿರುವ ಬಿ.ಎನ್.ಗರುಡಾಚಾರ್ ನಾನಾ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಂಗಳೂರು ಮಹಾನಗರ ಡಿಸಿಪಿ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು. ಡಿಜಿ-ಐಜಿಪಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಬಸವನಗುಡಿಯ ಕೃಷ್ಣ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಸಂತಾಪ: ಬಿ.ಎನ್.ಗರುಡಾಚಾರ್ ಅವರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರಾಮಾಣಿಕ ಕರ್ತವ್ಯಪ್ರಜ್ಞೆಯಿಂದ ಹೆಸರುವಾಸಿಯಾಗಿದ್ದ ಗರುಡಾಚಾರ್ ಇಂದಿನ ತಲೆಮಾರಿನ ಪೊಲೀಸ್ ಇಲಾಖೆಯವರಿಗೆ ಮಾದರಿ ಎನ್ನಬಹುದು. ಯಾವುದೇ ಲಾಬಿ, ಒತ್ತಡಗಳಿಗೆ ಮಣಿಯದೆ ಸಮಾಜಘಾತುಕರನ್ನು ಕಟ್ಟಿ ಹಾಕಿದವರು. ಕರ್ನಾಟಕ ಪೊಲೀಸ್ ವ್ಯವಸ್ಥೆಗೆ ಘನತೆ ತದ್ದುಕೊಟ್ಟವರು. ಇವರ ಅಗಲಿಕೆ ಸುದ್ದಿ ಕೇಳಿ ಬೇಸರವಾಗಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಆ ಭಗವಂತ ಕುಟುಂಬ ಸದಸ್ಯರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಿವಕುಮಾರ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಬಿ.ಎನ್.ಗರುಡಾಚಾರ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ, ಬಂಧು ಮಿತ್ರರು ಮತ್ತು ಅಭಿಮಾನಿಗಳಿಗೆ ಅಗಲುವಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.