ನಿವೃತ್ತ ಡಿಜಿ ಓಂಪ್ರಕಾಶ್ ಕೊಲೆಯಾದ ಬಳಿಕ ಅವರ ಮಗಳು ಕೃತಿಕಾ ಒಂಟಿಯಾಗಿ ಮನೆಯಲ್ಲಿ ವಾಸವಿದ್ದು, ನಂದಿನಿ ಪಾರ್ಲರ್ ಗೆ ನುಗ್ಗಿ ದಾಂಧಲೆ ನಡೆಸಿ ಸಿಬ್ಬಂದಿಯನ್ನು ಥಳಿಸಿ ಅಲ್ಲಿದ್ದ ವಸ್ತುಗಳನ್ನು ಪುಡಿಗೈದಿದ್ದಾರೆ. ಕೃತಿಕಾ ವರ್ತನೆಗೆ ಸ್ಥಳೀಯರು ಬೆಚ್ಚಿ ಬಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಓಂಪ್ರಕಾಶ್ ಕೊಲೆಯಾದ ನಂತರ ಕೃತಿಕಾ ಸಹೋದರ ಬೇರೆ ಕಡೆಗೆ ಶಿಫ್ಟ್ ಆಗಿದ್ದಾರೆ. ಮನೆಯಲ್ಲಿ ಈಕೆ ಒಂಟಿಯಾಗಿ ವಾಸವಿದ್ದಾರೆ. ಸಂಜೆ ಮನೆಯ ಪಕ್ಕದ ನಂದಿನಿ ಪಾರ್ಲರ್ ಗೆ ಬಂದಿದ್ದ ಕೃತಿಕಾ ಅಂಗಡಿ ಮುಂದೆ ಸ್ವಲ್ಪ ಹೊತ್ತು ಹಾಗೇ ನಿಂತು ಅಲ್ಲಿನ ಮಾಲೀಕನನ್ನು ದಿಟ್ಟಿಸಿ ನೋಡಿದ್ದಾರೆ, ಆಗ ಮಾಲೀಕ ಯಾಕೆ ಮೇಡಂ ಏನಾಯ್ತು ಎಂದು ಕೇಳಿದ್ದಾರೆ. ಕೋಪಗೊಂಡ ಕೃತಿಕಾ ಏಕಾಏಕಿ ಅಂಗಡಿಗಳಲ್ಲಿದ್ದ ಎಲ್ಲಾ ವಸ್ತುಗಳನ್ನು ಒಡೆದು ಹಾಕಿದ್ದಾರೆ.
ತಡೆಯಲು ಬಂದ ಮಾಲೀಕನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಭಯಗೊಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರನ್ನು ನೋಡಿ ಏನೂ ಆಗಿಯೇ ಇಲ್ಲದಂತೆ ಕೃತಿಕಾ ಮನೆಗೆ ಹೋಗಿದ್ದಾರೆ. ತಂದೆ ಕೊಲೆಯಾಗಿದ್ದಾರೆ, ತಾಯಿ ಜೈಲು ಸೇರಿದ್ದಾರೆ, ಸಹೋದರ ಮನೆ ಬಿಟ್ಟು ಬೇರೆ ಕಡೆಗೆ ಶಿಫ್ಟ್ ಆಗಿದ್ದಾರೆ, ಮನೆಯಲ್ಲಿ ಏಕಾಂಗಿಯಾಗಿ ಕೃತಿಕಾ ವಾಸವಿದ್ದಾರೆ.