Tuesday, December 16, 2025
Menu

ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಂಗಳೂರು ಟಾಪ್ 5 ಗೆ ತರಲು ಸಂಕಲ್ಪ: ಸಚಿವ ಬೈರತಿ ಸುರೇಶ್

byrtai suresh

ವಿಧಾನಪರಿಷತ್ತು: ಸ್ವಚ್ಛ ನಗರಗಳ ಕುರಿತು ರಾಷ್ಟ್ರೀಯ ಸ್ವಚ್ಛಭಾರತ್ ಮಿಸನ್ ನಡಿ ನಡೆಸುವ ಸಮೀಕ್ಷೆಯಲ್ಲಿ ಮಂಗಳೂರು ನಗರವನ್ನು ಟಾಪ್ 5 ರೊಳಗೆ ಬರುವಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಬಾರಿ ರಾಜ್ಯದ ಮೈಸೂರು ಮತ್ತು ದಾವಣಗೆರೆ ನಗರಗಳಿಗೆ ಟಾಪ್ 5 ರಲ್ಲಿ ಸ್ಥಾನ ದೊರಕಿದ್ದು, ಅತ್ಯುತ್ತಮ ಪ್ರಶಸ್ತಿಯನ್ನೂ ಪಡೆದುಕೊಂಡಿವೆ. ಅದೇ ರೀತಿ ಮಂಗಳೂರು ನಗರಕ್ಕೆ ಟಾಪ್ 25 ರಲ್ಲಿ ಸ್ಥಾನ ಬಂದಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಮಂಗಳೂರು ಮಹಾನಗರ ಪಾಲಿಕೆಯಡಿ ನಗರದ ಸ್ವಚ್ಛತೆ ಕಾಪಾಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇಲ್ಲಿ 310 ರಿಂದ 330 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಈ ಪೈಕಿ ಶೇ. 70ರಷ್ಟನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿ ಶುಕ್ರವಾರ ಒಣ ಕಸವನ್ನು ಮಾತ್ರ ಸಂಗ್ರಹ ಮಾಡಲಾಗುತ್ತಿದೆ. ಹೆಚ್ಚು ತ್ಯಾಜ್ಯ ಉತ್ಪಾದನೆ ಮಾಡುವ ಸಂಸ್ಥೆಗಳೇ ಸ್ವತಃ ತ್ಯಾಜ್ಯವನ್ನು ಸಂಸ್ಕರಣೆ ಮಾಡುವುದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ಸಮರ್ಪಕವಾಗಿ ಕಸ ವಿಂಗಡಣೆ ಮಾಡದೇ ಇರುವವರು ಮತ್ತು ಕಸ ಸಂಸ್ಕರಣೆ ಮಾಡದೇ ಇರುವವರಿಗೆ ಬೆಂಗಳೂರು ಮಾದರಿಯಲ್ಲಿ ದಂಡ ವಿಧಿಸಲು ಪಾಲಿಕೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದ್ದು, ಅಗತ್ಯ ಬಿದ್ದರೆ ಪೊಲೀಸರ ನೆರವನ್ನೂ ಪಡೆಯಲು ಸೂಚಿಸಲಾಗಿದೆ ಎಂದು ಹೇಳಿದರು.

ರಸ್ತೆ ಬದಿಯಲ್ಲಿ ಕಸ ಎಸೆಯುವವರನ್ನು ಪತ್ತೆ ಮಾಡುವ ಸಲುವಾಗಿ ನಗರದಲ್ಲಿ 60 ಕ್ಕೂ ಹೆಚ್ಚು ಸೌರಚಾಲಿತ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ರೀತಿಯಲ್ಲಿ ತ್ಯಾಜ್ಯವನ್ನು ಉತ್ತಮ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಸ್ವಚ್ಛ ನಗರಗಳ ಸಾಲಿನಲ್ಲಿ ಟಾಪ್ 5 ರಲ್ಲಿ ಮಂಗಳೂರನ್ನು ತರುವ ನಿಟ್ಟಿನಲ್ಲಿ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *