Monday, September 15, 2025
Menu

ಬರ ಪರಿಹಾರ ಹಂಚಿಕೆ ವಿವಾದ ನೀವೇ ಬಗೆಹರಿಸಿಕೊಳ್ಳಿ: ಕೇಂದ್ರ, ಕರ್ನಾಟಕಕ್ಕೆ ಸುಪ್ರೀಂ ಸೂಚನೆ

supreme court

ಬರ ಪರಿಹಾರ ಹಂಚಿಕೆಯ ತಾರತಮ್ಯ ಕುರಿತ ವಿವಾದವನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ನ್ಯಾಯಮೂರ್ತ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ವಿಭಾಗೀಯ ಪೀಠ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಆರ್ಥಿಕ ನೆರವು ನೀಡಿಕೆಯಲ್ಲಿ ತಾರತಮ್ಯ ಉಂಟಾಗಿದ್ದು, ರಾಜ್ಯದ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುತ್ತಿದ್ದು, ಸೂಕ್ತ ಹಣ ಬಿಡುಗಡೆಗೆ ಆಗ್ರಹಿಸಿ ಕರ್ನಾಟಕ ಸಲ್ಲಿಸಿದ್ದ ಮನವಿ ಕುರಿತು ಮಧ್ಯಸ್ಥಿಕೆ ವಹಿಸಲು ನಿರಾಕರಿಸಿತು.

ಇಲ್ಲಿಯವರೆಗೂ ಎಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಕರ್ನಾಟಕ ಪರ ವಕೀಲರು ರಾಜ್ಯ ಸರ್ಕಾರ 18, 171 ಕೋಟಿ ರೂ. ಬಿಡುಗಡೆಗೆ ಮನವಿ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ 3, 819 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ವಿಚಾರದಲ್ಲಿ ಅಫಿಡವಿಟ್ ಸಲ್ಲಿಸಲು ಕಾಲಾವಕಾಶದ ಅಗತ್ಯವಿದೆ ಎಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ವಿವಾದವನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿತು.

ರಾಜ್ಯ ತೀವ್ರ ರೀತಿಯ ಬರ ಪರಿಸ್ಥಿತಿ ಎದುರಿಸಿದ್ದು, ಕಳೆದ ವರ್ಷ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. 196 ತಾಲ್ಲೂಕುಗಳು ತೀವ್ರ ಬರ ಪರಿಸ್ಥಿತಿಗೆ ತುತ್ತಾಗಿದ್ದು, ಉಳಿದ 27 ತಾಲ್ಲೂಕುಗಳಲ್ಲಿ ಸಾಧಾರಣ ರೀತಿಯಲ್ಲಿ ಬರ ಪರಿಸ್ಥಿತಿಯಿದೆ ಎಂದು ವರದಿ ನೀಡಿತ್ತು.

Related Posts

Leave a Reply

Your email address will not be published. Required fields are marked *