ಭಾರತೀಯ ರಿಸರ್ವ್ ಬ್ಯಾಂಕ್ ರಿಪೋ ದರಗಳನ್ನು 25 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ಆರ್‌ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ರಿಪೋ ದರವನ್ನು ಶೇ. 6.25ರಿಂದ ಶೇ 6ಕ್ಕೆ ಇಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ರಿಪೋ ರೇಟ್ ಅಂದರೆ ರೀಪರ್ಚೇಸ್ ಅಗ್ರೀಮೆಂಟ್ ರೇಟ್. ಬ್ಯಾಂಕುಗಳಿಗೆ ಫಂಡಿಂಗ್ ಅವಶ್ಯಕತೆ ಬಿದ್ದಾಗ ಸರ್ಕಾರಿ ಬಾಂಡ್ಗಳನ್ನು ಆರ್ಬಿಐನಲ್ಲಿ ಅಡವಿಟ್ಟು ಸಾಲ ಪಡೆಯಬಹುದು. ಆದರೆ ಅಡವಿಟ್ಟ ಬಾಂಡ್ ಅಥವಾ ಸೆಕ್ಯೂರಿಟಿಗಳನ್ನು ಪೂರ್ವನಿಗದಿತ ದರಕ್ಕೆ ಮರುಖರೀದಿ ಮಾಡಲಾಗುವುದೆಂದು ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಇದೇ ರೀಪರ್ಚೇಸ್ ಅಗ್ರೀಮೆಂಟ್ ರೇಟ್. ಆರ್ಬಿಐನಿಂದ ಸಾಲ ಪಡೆಯಲು ಬ್ಯಾಂಕುಗಳು ತೆರಬೇಕಿರುವ ಬಡ್ಡಿದರವೇ ರಿಪೋ ರೇಟ್. ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಬಳಿ ಇರುವ ಅಸ್ತ್ರ ಇದಾಗಿದೆ.
ಬೆಲೆ ಏರಿಕೆ ಆಗುತ್ತಿದೆ ಎನ್ನುವಾಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಣದ ಹರಿವು ಕಡಿಮೆ ಮಾಡಲು ಆರ್‌ಬಿಐ ರಿಪೋ ದರವನ್ನು ಹೆಚ್ಚಿಸುತ್ತದೆ. ಹಣದುಬ್ಬರ ನಿಯಂತ್ರಣ ದಲ್ಲಿದ್ದರೆ ಮತ್ತು ಆರ್ಥಿಕತೆಗೆ ಬಲ ನೀಡುವ ಅವಶ್ಯಕತೆ ಇದೆ ಅಂದಾಗ ಬ್ಯಾಂಕಿಂಗ್ ವಲಯಕ್ಕೆ ಹೆಚ್ಚು ಹಣದ ಹರಿವು ಬೇಕಾಗುತ್ತದೆ. ಆಗ ರಿಪೋ ದರವನ್ನು ಆರ್‌ಬಿಐ ಇಳಿಸುತ್ತದೆ.
ಜಾಗತಿಕ ಅನಿಶ್ಚಿತ ಸ್ಥಿತಿ, ಸುಂಕ ಸಮರದ ಈ ಸಂದರ್ಭದಲ್ಲಿ ಆರ್‌ಬಿಐ ನೀತಿ ನಿರ್ಧಾರಕ್ಕೆ ಸಾಕಷ್ಟು ಸವಾಲಿನ ಸ್ಥಿತಿ ಇದೆ. ರಿಪೋ ದರ ಕಡಿತಗೊಳಿಸುವ ಜೊತೆಗೆ ಎಸ್ಡಿಎಫ್ ಮತ್ತು ಎಂಎಸ್ಎಫ್ ದರಗಳನ್ನೂ ಕೊಂಚ ಇಳಿಸಲಾಗಿದೆ.