ಮೀಸಲು ಹಾಗೂ ಒಳಮೀಸಲು ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರದ ನೀತಿಯೇ ಅಸ್ಪಷ್ಟ. ಎಲ್ಲವೂ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿದೆ. ಎಲ್ಲಿವರೆಗೆ ರಾಜ್ಯದಲ್ಲಿ ಮೀಸಲು ಮತ್ತು ಒಳ ಮೀಸಲು ನಿಗದಿ ಸರ್ಕಾರದ ಮಟ್ಟದಲ್ಲಿ ಖಚಿತ ಶಾಸನ ಸ್ವರೂಪ ತಾಳುವುದಿಲ್ಲವೋ, ಅಲ್ಲಿಯವರೆಗೂ ಹುದ್ದೆಗಳ ಭರ್ತಿಯಲ್ಲಿ ತಲೆದೋರಿರುವ ಸಮಸ್ಯೆ ಮತ್ತು ಗೊಂದಲಗಳಿಗೆ ಸರ್ಕಾರ ಅಂತಿಮ ತೆರೆ ಎಳೆಯಲು ಸಾಧ್ಯವಿಲ್ಲ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನನೆಗುದಿಗೆ ಬಿದ್ದ ಲಕ್ಷಾಂತರ ಹುದ್ದೆಗಳ ನೇಮಕಾತಿ ಈಗ ಭುಗಿಲೆಬ್ಬಿಸಿದೆ. ಧಾರವಾಡದಲ್ಲಿ ಅಪಾರ ಯುವಸಮೂಹ ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸಿದೆ. ಮೂರೂಮುಕ್ಕಾಲು ಲಕ್ಷ ಹುದ್ದೆಗಳು ಯಾಕೆ ಇದುವರೆಗೂ ಭರ್ತಿಯಾಗಿಲ್ಲ ಎಂಬುದು ರಾಜ್ಯದ ಮುಂದಿರುವ ಪ್ರಶ್ನೆ . ಆದರೆ ಸರ್ಕಾರ ಮತ್ತು ವಿರೋಧ ಪಕ್ಷಗಳಿಬ್ಬರೂ ಅತಿ ಜಾಣತನ ದಿಂದ ಹೊಣೆಗಾರಿಕೆಯಿಂದ ನುಣಚಿಕೊಳ್ಳುವ ಸಬೂಬು ಮತ್ತು ಸಮಜಾಯಿಷಿಗಳೂ ಈಗ ಒಂದೊಂದಾಗಿ ಹೊರ ಬರತೊಡಗಗಿದೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಈ ದಿಶೆಯಲ್ಲಿ ಆಗಿದ್ದೇನು ? ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಆಗುತ್ತಿರುವುದೇನು? ಸರ್ಕಾರಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ , ಹಿಂದಿನ ಸರ್ಕಾರವಾಗಲಿ, ಇಂದಿನ ಸರ್ಕಾರವಾಗಲಿ ವಾಸ್ತವಿಕ ನೆಲೆಗಟ್ಟಿನ ಮೇಲೆ ಆಲೋಚಿಸಿ ತೀರ್ಮಾನ ಕೈಗೊಳ್ಳಲಿಲ್ಲ ಎಂಬುದಂತೂ ಕಟುಸತ್ಯ. ಆಯಾ ಕಾಲ ಘಟ್ಟದಲ್ಲಿ , ಆಯಾ ಸರ್ಕಾರಗಳು ಅಲೋಚಿಸಿ ಸೂಕ್ತ ಕ್ರಮ ಕೈಗೊಂಡಿದ್ದಿದ್ದರೆ , ಈಗ ಯುವಸಮೂಹ ಸಿಡಿದು ಬೀದಿಗೆ ಬರುತ್ತಿರಲಿಲ್ಲ. ಸರ್ಕಾರಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರಗಳ ಧೋರಣೆಯೇ ಸಮರ್ಥನೀಯವಲ್ಲ. ಎಲ್ಲ ಇಲಾಖೆಗಳಲ್ಲಿ ಕಾಯಂ ಸಿಬ್ಬಂದಿ ನೇಮಕಾತಿಗಿಂತಲೂ ಗುತ್ತಿಗೆ ನೇಮಕಾತಿಯೇ ಉತ್ತಮ. ಇದರಿಂದ ರಾಜ್ಯದ ಖಜಾನೆ ಕೈ ಕಚ್ಚುವುದಿಲ್ಲ. ಅಧಿಕಾರದಲ್ಲಿರುವರೆಗೆ ನಾವು ಕೂಡಾ ಸುರಕ್ಷಿತ ಎಂಬುದು ಮಂತ್ರಿ, ಮಹೋದಯರ ಮನದಾಳ.
ಇನ್ನು ರಾಜ್ಯದಲ್ಲಿ ಒಂದು ಗುಮಾಸ್ತ ಹುದ್ದೆ ನೇಮಕಾತಿಗೂ ನೂರೊಂದು ತೊಡಕು ! ಒಂದು: ಇತ್ಯರ್ಥವಾಗದ ಮೀಸಲು, ಒಳಮೀಸಲು ಕಗ್ಗಂಟು, ಎರಡು: ಸರ್ಕಾರದ ನೇಮಕಾತಿ ನಿಯಮಾವ ಳಿಗಳಿಗೆ ಕೆಎಟಿ ಮತ್ತು ಹೈಕೋರ್ಟ್ ಜಾರಿ ಮಾಡಿರುವ ಹಲವು ಹತ್ತು ಆದೇಶಗಳು ಮತ್ತು ತಡೆಯಾಜ್ಞೆಗಳು ! ಕಳೆದ ಒಂದೂವರೆ ದಶಕದಿಂದ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಎದುರಾದ ಬಹು ದೊಡ್ಡ ಸವಾಲುಗಳಿವು. ಈ ಸವಾಲುಗಳನ್ನು ಸರ್ಕಾರಗಳು ಸಕಾಲದಲ್ಲಿ ಸಮಪರ್ಥವಾಗಿ ಎದುರಿಸಿ ಈ ಸಮಸ್ಯೆಗೆ ಪರಿಹಾರ ಸೂಚಿಸುವ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಬೇಕಿತ್ತು. ಮೀಸಲು, ಮತ್ತು ಒಳಮೀಸಲು ನಿಗದಿ ವಿಚಾರದಲ್ಲಿ ಸರ್ಕಾರದ ನೀತಿ ಮತ್ತು ನಿಲುವು ಅಸ್ಪಷ್ಟ. ಎಲ್ಲವೂ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿದೆ.
ಎಲ್ಲಿಯವರೆಗೆ ರಾಜ್ಯದಲ್ಲಿ ಮೀಸಲು ಮತ್ತು ಒಳಮೀಸಲು ನಿಗದಿ ವಿಚಾರದಲ್ಲಿ ಸರ್ಕಾರ ಖಚಿತ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ನೇಮಕಾತಿ ಗೊಂದಲಗಳಿಗೂ ಸರ್ಕಾರ ತೆರೆ ಎಳೆಯಲು ಸಾಧ್ಯವಿಲ್ಲ. ಅಲ್ಲದೆ ಎಲ್ಲಿಯವರೆಗೆ ಸಮಾಜದ ಎಲ್ಲ ವರ್ಗದವರಿಗೂ ಸಾಂವಿಧಾನಿಕವಾಗಿ ಸರ್ಕಾರಕ್ಕೆ ಮೀಸಲು ನಿಗದಿಪಡಿಸಿ ಶಾಸನ ರಚಿಸಲಾಗುವುದಿಲ್ಲವೊ ಅಲ್ಲಿಯವರೆಗೆ ಹುದ್ದೆಗಳ ಭರ್ತಿಯೂ ಅಸಾಧ್ಯ. ದೇಶದ ಕಾನೂನುಗಳ ಪರಿಧಿಯನ್ನು ಮೀರುವ ನೇಮಕಾತಿಯನ್ನು ನ್ಯಾಯಾಲಯಗಳು ಖಂಡಿತವಾಗಿಯೂ ಒಪ್ಪುವುದಿಲ್ಲ. ಸಿದ್ದರಾಮಯ್ಯ ಸರ್ಕಾರ ದಿಶೆಯಲ್ಲಿ ಮೊದಲನೆಯದಾಗಿ ತಮ್ಮ ಗಮನ ಹರಿಸಬೇಕಿರುವುದು ಈ ಕಡೆಗೆ. ಕೋರ್ಟ್‌ಗಳ ಮುಂದಿರುವ ತಡೆಯಾಜ್ಞೆಗಳು ತೆರವುಗೊಳಿಸಬೇಕಾದರೆ ಮೀಸಲು ವಿಚಾರದಲ್ಲಿ ಸರ್ಕಾರದ ಬಳಿ ಸಮರ್ಥನೀಯವಾದ ಮಾಹಿತಿ ಮತ್ತು ಸಮ್ಮತಿಪೂರ್ಣ ನಿಯಮಾವಳಿಯೂ ಇರಬೇಕು. ಈ ವಿಚಾರದಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಆಲೋಚಿಸಿ ಯುವಜನತೆಗೆ ನ್ಯಾಯ ಒದಗಿಸುವುದೇ ?


