ಜಿಡಿಪಿಯನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಆರ್‌ಬಿಐ ಸತತ 3ನೇ ಬಾರಿಗೆ ರೆಪೋ ದರ ಕಡಿತಗೊಳಿಸಿದೆ. ನಿರೀಕ್ಷೆಗೂ ಮೀರಿ 50 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದ್ದು ರೆಪೋ ಬಡ್ಡಿ ದರ ಶೇ.6 ರಿಂದ ಶೇ.5.50ಕ್ಕೆ ಇಳಿಕೆಯಾಗಿದೆ.
ಆರ್‌ಬಿಐನ ಹಣಕಾಸು ನೀತಿ ಸಮಿತಿಯು 50 ಮೂಲಾಂಶದಷ್ಟು ರೆಪೋ ದರ ಕಡಿಮೆ ಮಾಡಲು ನಿರ್ಧರಿಸಿರುವುದಾಗಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.
ಸಾಲ ಮತ್ತು ಇಎಂಐಗಳ ಬಡ್ಡಿ ದರವೂ ಇಳಿಕೆಯಾಗಲಿದೆ. ಹೊಸ ಸಾಲಗಾರರಿಗೆ ಗೃಹ ಸಾಲಗಳು, ವಾಹನದ ಮೇಲಿನ ಸಾಲಗಳು ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ. ಆಟೊ ಮೊಬೈಲ್, ಕಾರ್ಪೊರೇಟ್ ಸಾಲಗಳ ಮೇಲಿನ ಮರುಪಾವತಿ ಕಂತುಗಳಲ್ಲಿಯೂ ಇಳಿಕೆಯಾಗುವ ನಿರೀಕ್ಷೆ ಇದೆ. ರೆಪೋ ದರದಲ್ಲಿ ಶೇ 0.25 ಇಳಿಕೆ ಆಗಬಹುದೆಂದು ತಜ್ಞರು ನಿರೀಕ್ಷಿಸಿದ್ದರು. ಆದರೆ ಆರ್‌ಸಿಬಿ ನಿರೀಕ್ಷೆಗೂ ಮೀರಿ ಇಳಿಕೆ ಮಾಡಿದೆ. ಜಿಡಿಪಿಯು 4 ವರ್ಷದ ಕನಿಷ್ಠ ಮಟ್ಟ ಶೇ 6.5ಕ್ಕೆ ಕುಸಿದಿತ್ತು. ಜಿಡಿಪಿ ಉತ್ತೇಜನಕ್ಕೆ ರೆಪೋ ದರ ಕಡಿತಗೊಳಿಸಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿನ ಇಳಿಕೆ ಇದು.
ವಾಣಿಜ್ಯ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರವೇ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ರೆಪೋ ದರ ಜಾಸ್ತಿ ಇದ್ದರೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡುತ್ತದೆ.