ಸುಪ್ರೀಂಕೋರ್ಟ್ ವಿಭಾಗೀಯ ಪೀಠವೀಗ ದರ್ಶನ್ ಮತ್ತು ಪವಿತ್ರಾಗೌಡ ಜಾಮೀನು ರದ್ದುಗೊಳಿಸಿ, ಜೈಲಿನಲ್ಲಿ ಗಣ್ಯಾತಿಗಣ್ಯರಿಗೆ ನೀಡುವ ವಿಶೇಷ ಸೌಲತ್ತು ಈ ಆರೋಪಿಗಳಿಗೆ ನೀಡುವಂತಿಲ್ಲ ಎಂದೂ ರಾಜ್ಯದ ಜೈಲಿನ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ನಟ ದರ್ಶನ್ ಮತ್ತು ನಟಿ ಪವಿತ್ರಾಗೌಡ ಸೇರಿದಂತೆ ಒಟ್ಟು ಏಳು ಮಂದಿಗೆ ಮಂಜೂರಾಗಿದ್ದ ಜಾಮೀನು ಈಗ ರದ್ದಾಗಿದೆ. ರಾಜ್ಯ ಹೈಕೋರ್ಟ್ ಆರೋಪಿಗಳಿಗೆ ಮಂಜೂರು ಮಾಡಿದ್ದ ಜಾಮೀನು ಅನ್ನು ರದ್ದುಪಡಿಸಿ ಮತ್ತೆ ಆರೋಪಿಗಳನ್ನು ಜೈಲಿನಲ್ಲಿಡಲು ಆದೇಶಿಸಿದೆ. ದರ್ಶನ್ ಮತ್ತು ಪವಿತ್ರಾಗೌಡ ಮೊದಲಾದವರಿಗೆ ರಾಜ್ಯ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಫರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹದೇವನ್ ಅವರಿದ್ದ ಸುಪ್ರೀಂಕೋರ್ಟ್ ವಿಭಾಗೀಯ ಪೀಠವೀಗ ಜಾಮೀನು ರದ್ದುಗೊಳಿಸಿ, ಜೈಲಿನಲ್ಲಿ ಗಣ್ಯಾತಿಗಣ್ಯರಿಗೆ ನೀಡುವ ವಿಶೇಷ ಸೌಲತ್ತು ಈ ಆರೋಪಿಗಳಿಗೆ ನೀಡುವಂತಿಲ್ಲ ಎಂದೂ ರಾಜ್ಯದ ಜೈಲಿನ ಅಧಿಕಾರಿಗಳಿಗೆ ಖಡಕ್ ಎಚ್ಚರಿಕ ನೀಡಿದೆ.
ಸುಪ್ರೀಂಕೋರ್ಟ್ ಈಗ ದರ್ಶನ್ ಮತ್ತು ಪವಿತ್ರಾಗೌಡ ಅವರ ಜಾಮೀನು ರದ್ದುಪಡಿಸಿ ಹೊರಡಿಸಿರುವ ಆದೇಶದಲ್ಲಿ ಸುಪ್ರೀಂಕೋರ್ಟ್ ಕೆಲವೊಂದು ಆಕ್ಷೇಪಗಳನ್ನು ವ್ಯಕ್ತಪಡಿಸಿದೆ. ಈ ದೇಶದಲ್ಲಿ ಕಾನೂನು ಎಂಬುದು ಎಲ್ಲರಿಗೂ ಒಂದೇ. ಇದನ್ನು ಹೊರತುಪಡಿಸಿ ಆರೋಪಿಗಳ ಸ್ಥಾನ ಮಾನ ಪರಿಗಣಿಸಿ ಆದೇಶ ನೀಡುವ ಪರಿಪಾಠ ನ್ಯಾಯಶಾಸ್ತ್ರದಲ್ಲಿ ಇಲ್ಲವೇ ಇಲ್ಲ. ರೇಣುಕಾಸ್ವಾಮಿ ಅಂತಹ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಜಾಮೀನು ನೀಡುವುದರಿಂದ ಸಾಕ್ಷ್ಯಗಳು ಮತ್ತು ತನಿಖೆ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಸಾಧ್ಯತೆಗಳಿವೆ. ಆದ್ದರಿಂದ ದರ್ಶನ್ ಮತ್ತು ಪವಿತ್ರಾಗೌಡ ಇವರಿಬ್ಬರೂ ಜಾಮೀನು ಪಡೆಯಲು ಅರ್ಹರಲ್ಲ ಎಂಬ ರಾಜ್ಯದ ವಾದವನ್ನು ಸುಪ್ರೀಂಕೋರ್ಟ್ ಒಪ್ಪಿದೆ.
ಸುಪ್ರೀಂಕೋರ್ಟ್ ಗುರುವಾರದಂದು ಘೋಷಿಸಿದ ಈ ಆದೇಶದಿಂದ ದೇಶದ ಸರ್ವೋನ್ನತ ನ್ಯಾಯಾಲಯದ ಮೇಲೆ ದೇಶದ ಸಾಮಾನ್ಯ ಪ್ರಜೆಗಿರುವ ನಂಬಿಕೆ ಮತ್ತು ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಬೆಂಗಳೂರಿನ ಪಟ್ಟಣಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಸುದೀರ್ಘ ತನಿಖೆ ನಡೆಸಿ ಆರೋಪಿಗಳ ವಿರುದ್ದ ಸೆಷನ್ಸ್ ನ್ಯಾಯಾಲಯದಲ್ಲಿ ಸಾವಿರಾರು ಪುಟಗಳ ದೋಷಾರೋಪ ಪಟ್ಟಿ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ವಿಶೇಷ ತನಿಖಾತಂಡವು ಎಲ್ಲ ಆಧುನಿಕ ತನಿಖಾ ತಾಂತ್ರಿಕ ಕೌಶಲ್ಯಗಳನ್ನು ಬಳಸಿ ಸಿದ್ದಪಡಿಸಲಾದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದು ಗಮನಾರ್ಹ.
ಈ ಪ್ರಕರಣದಲ್ಲಿ ಸುಮಾರು ಐದುನೂರಕ್ಕೂ ಮಿಗಿಲಾದ ಸಾಕ್ಷ್ಯಗಳಿವೆ ಮತ್ತು ಕೊಲೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳೂ ಇವೆ. ಇವೆಲ್ಲವೂ ಈಗ ನ್ಯಾಯಾಲಯದ ಮುಂದೆ ವಿಚಾರಣೆ ನಡೆಯುವ ಸಮಯದಲ್ಲಿ ನ್ಯಾಯಪೀಠದ ಪರಿಶೀಲನೆ ಮತ್ತು ಪರಾಮರ್ಶೆಗೆ ಒಳಪಡುವಂತಹದು. ಎಲ್ಲ ಸಾಕ್ಷ್ಯಗಳ ವಿಚಾರಣೆ ಮುಗಿದು ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಬೇಕಾದರೆ ಸಮಯವೂ ಬಹಳಷ್ಟು ಹಿಡಿಸೀತು. ಅಲ್ಲಿಯವರೆಗೂ ದರ್ಶನ್ ಮತ್ತು ಪವಿತ್ರಾಗೌಡ ಜೈಲಿನಲ್ಲಿಯೇ ಇರಬೇಕಾಗುವುದೇ ಅಥವಾ ಬೇರೆ ಸಂಗತಿಗಳನ್ನು ಆಧರಿಸಿ ಆರೋಪಿಗಳು ಮತ್ತೆ ಜಾಮೀನು ಕೋರಿದಾಗ ನ್ಯಾಯಾಲಯ ಇದನ್ನು ಹೇಗೆ ಪರಿಗಣಿಸುವುದೆಂಬುದು ಮುಖ್ಯ. ಒಟ್ಟಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಮಗ್ರವಾಗಿ ಚಾರ್ಜ್ಶೀಟ್ ಕೂಡಾ ಸಲ್ಲಿಕೆಯಾಗಿರುವುದರಿಂದ ಇನ್ನು ಸಾಕ್ಷ್ಯಗಳ ವಿಚಾರಣೆಯೊಂದೇ ಬಾಕಿ ಇದೆ.