ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಚೇರಿ 150 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿದ್ದು, 2 ದಶಕದ ನಂತರ ಹಳೆಯ ಪ್ರಧಾನ ಕಚೇರಿಗೆ ಮರಳಲು ಸಿದ್ಧತೆ ನಡೆದಿದೆ.
ದೆಹಲಿಯ ಹಳೆಯ 2 ಅಂತಸ್ತಿನ ಕಟ್ಟಡ ಇದೀಗ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 12 ಅಂತಸ್ತುಗಳಿಗೆ ಎತ್ತರಿಸಲಾಗಿದೆ. 3.75 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕಟ್ಟಡದಲ್ಲಿ 300 ಕೊಠಡಿಗಳು ಇದ್ದು, ಆರ್ ಎಸ್ ಎಸ್ ಕಾರ್ಯಕ್ರಮ, ಕಾರ್ಯಕರ್ತರ ಪ್ರತ್ಯೇಕ ಸಭೆ ನಡೆಸಲು ಹಾಗೂ ತಂಗಲು ವ್ಯವಸ್ಥೆ ಮಾಡಲಾಗಿದೆ.
2018ರಲ್ಲಿ ಆರ್ ಎಸ್ ಎಸ್ ನವೀಕರಣ ಕಾಮಗಾರಿ ಆರಂಭಗೊಂಡಿದ್ದು, ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಒಳಾಂಗಣ ವಿನ್ಯಾಸ ಬಾಕಿ ಇದೆ. ಫೆಬ್ರವರಿ 19ರಿಂದ ಕಟ್ಟಡದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳು ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ.
ಕಟ್ಟಡದ ಪ್ರಮುಖ ಸಭಾಂಗಣಕ್ಕೆ ವಿಶ್ವ ಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಘಾಲ್ ಹೆಸರಿಡಲಾಗಿದೆ. ಕಟ್ಟಡಕ್ಕೆ ಕೇಶವ್ ಗಂಜ್ ಎಂಬ ಹಿಂದಿನ ಹೆಸರನ್ನೇ ಉಳಿಸಿಕೊಳ್ಳಲಾಗಿದ್ದು, ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮೊದಲ ಮೂರು ಅಂತಸ್ತುಗಳಿಗೆ ಸಾಧನಾ, ಪ್ರೇರಣಾ, ಅರ್ಚನಾ ಎಂಬ ಹೆಸರಿಡಲಾಗಿದೆ.
ಆರ್ ಎಸ್ ಎಸ್ ಕಟ್ಟಡ ನಿರ್ಮಾಣಕ್ಕೆ 150 ಕೋಟಿ ರೂ. ವೆಚ್ಚವಾಗಿದ್ದು, 75 ಸಾವಿರ ದಾನಿಗಳು ನೆರವಾಗಿದ್ದಾರೆ. ಕಟ್ಟಡದ ಒಂದು ಅಂತಸ್ತಿನಲ್ಲಿ 5 ಹಾಸಿಗೆ ಕಿರು ಆಸ್ಪತ್ರೆ, ಕ್ಲಿನಿಕ್ ಇದೆ. ಮತ್ತೊಂದು ಅಂತಸ್ತಿನಲ್ಲಿ ಗ್ರಂಥಾಲಯ ಇದ್ದು, ಸಾವಿರಾರು ಪುಸ್ತಕಗಳ ಸಂಗ್ರಹವಿದೆ.
ಮಾರ್ಚ್ 21ರಿಂದ 23ರವರೆ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಮಾವೇಶ ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಬಗ್ಗೆ ನಾಗ್ಪುರದಲ್ಲಿರುವ ಪ್ರಧಾನ ಕಚೇರಿಯಲ್ಲಿ ಶೀಘ್ರದಲ್ಲೇ ಸಭೆ ಸೇರಿ ಕಾರ್ಯಕ್ರಮ ಸಂಯೋಜನೆ ಕುರಿತು ಚರ್ಚೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.