Wednesday, January 07, 2026
Menu

ಬಿಡಿಎ ಎಂದರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ತೆಗೆದುಹಾಕಿ: ಡಿಸಿಎಂ ಕರೆ

DK Shivakumar

ಬೆಂಗಳೂರು: “ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಐವತ್ತು ವರ್ಷ ತುಂಬಿದ್ದು, ಈ ವರ್ಷದಿಂದಲಾದರೂ ಬಿಡಿಎ ಘನತೆ ಬದಲಾಯಿಸಿ. ಬಿಡಿಎ ಎಂದರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕವನ್ನು ತೆಗೆದುಹಾಕಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಸುಧಾರಣೆಗಳು, ಸಾರ್ವಜನಿಕ ಅಹವಾಲು ನಿರ್ವಹಣೆ ಕುರಿತು ಬಿಡಿಎ ನೌಕರರಿಗೆ ತರಬೇತಿ ಕಾರ್ಯಗಾರವನ್ನು ಶಿವಕುಮಾರ್ ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

“ನಮಗೆ ಏನು ತರಬೇತಿ ನೀಡುತ್ತಾರೆ ಎಂದು ನೀವು ಅಚ್ಚರಿಯಾಗಬಹುದು. ನಾವು ಎಷ್ಟೇ ಬುದ್ಧಿವಂತರಾದರೂ ಜ್ಞಾನ, ಅನುಭವದ ಮೂಲಕ ಸಾಯುವವರೆಗೂ ಕಲಿಯುವ ಅಗತ್ಯವಿರುತ್ತದೆ. ಹೊಸ ತಲೆಮಾರು, ಹೊಸ ವ್ಯವಸ್ಥೆ ಬರುತ್ತದೆ. ನಾವು ಅಂಕಿಗಳನ್ನು ಗುಣಿತ ಮಾಡುತ್ತಿದ್ದೆವು, ನಂತರ ಕ್ಯಾಲ್ಕುಲೇಟರ್ ಬಂದಿತು. ನಂತರ ಕಂಪ್ಯೂಟರ್, ಈಗ ಕೃತಕ ಬುದ್ಧಿಮತ್ತೆ ಕಾಲ ಬಂದಿದೆ. ಈಗ ಭೂ ಮಾಪನವನ್ನು ಟೇಪ್ ಹಿಡಿದು ಮಾಡುವ ಅಗತ್ಯವಿಲ್ಲ, ಡ್ರೋನ್ ಮೂಲಕವೇ ಅಳತೆ ಮಾಡಬಹುದಾಗಿದೆ” ಎಂದು ತಿಳಿಸಿದರು.

“ನಾನು ನನ್ನದೇ ಆದ ರೀತಿಯ ಇಂಟಿಲಿಜೆನ್ಸ್ ಮೂಲಕ ನಿಮ್ಮಲ್ಲಿ ನಡೆಯುತ್ತಿರುವ ಸಂತೆ, ದಂಧೆ, ಏಜೆಂಟ್ ಗಳ ಪಟ್ಟಿ ಪಡೆಯಲು ನನಗೆ ಆರು ತಿಂಗಳು ಬೇಕಾಯಿತು. ಪ್ರತಿ ಹಂತದಲ್ಲಿ ಎಷ್ಟು ಕೊಳಕಿದೆ, ಎಷ್ಟು ಒಳ್ಳೆಯದಿದೆ ಎಂಬುದನ್ನು ಅರಿತಿದ್ದೇನೆ. ಹೀಗಾಗಿ ನಾನು ಎಲ್ಲಾ ದಾಖಲೆಗಳನ್ನು ಡಿಜಿಟಲ್ ಸ್ಕ್ಯಾನ್ ಮಾಡಲು ತೀರ್ಮಾನಿಸಿದ್ದೇನೆ. ಕೆಲವರಿಗೆ ಇದರಿಂದ ಸಮಾಧಾನವಾಗದಿರಬಹುದು. ನಿಮ್ಮಲ್ಲಿ ಈ ರೀತಿ ಕೇವಲ 10% ಮಾತ್ರ ಇರಬಹುದು. ಅವರಿಂದ ಇಡೀ ಬಿಡಿಎಗೆ ಕೆಟ್ಟ ಹೆಸರು ಬರುತ್ತಿದೆ. ನಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆಯಾದರೂ ನಾವು ಬಿಡಿಎ ಘನತೆಯನ್ನು ಬದಲಿಸಿಕೊಂಡು ಹೋಗಬೇಕು. ಈ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಲು ತರಬೇತಿ ನೀಡುತ್ತಿದ್ದೇವೆ” ಎಂದು ತಿಳಿಸಿದರು.

“ಬಿಡಿಎ ಹಾಗೂ ಜಿಬಿಎ ಬೆಂಗಳೂರಿನ ಮುಖವಾಣಿ. ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಬೆಂಗಳೂರಿಗೆ ನಿಮ್ಮ ಶಿಸ್ತು ಹಾಗೂ ಪ್ರಾಮಾಣಿಕತೆ ಅಗತ್ಯವಿದೆ. ಇವು ಇಲ್ಲವಾದರೆ ಯಾರು ಏನು ಮಾಡಲು ಸಾಧ್ಯವಿಲ್ಲ. ನೀವು ಪ್ರತಿ ಫೈಲ್ ಗಳನ್ನು ಕೊಕ್ಕೆ ಹಾಕಿ ಓಡಾಡಿಸುವ ಬದಲು ಸಕಾರಾತ್ಮಕ ಮನೋಭಾವದಲ್ಲಿ ಪರಿಹಾರ ಹುಡುಕಿ. ತಪ್ಪು ಮಾಡಿ ನನ್ನ ಕಣ್ಣಿಗೆ ಬೀಳಬೇಡಿ. ಬಿದ್ದರೆ ಬಡಿದು ಬಿಸಾಕುತ್ತೇನೆ. ಕೇಸು ದಾಖಲಿಸಿದ ಬಳಿಕ, ಯಾರಿಂದ ಶಿಫಾರಸ್ಸು ತಂದರೂ ನಾನು ಬಗ್ಗುವುದಿಲ್ಲ. ಬೆಂಗಳೂರು ಕಟ್ಟುವಲ್ಲಿ ನಿಮ್ಮ ಕೊಡುಗೆಯೂ ಇರಲಿ. ಬಿಡಿಎ ಹಾಗೂ ಬಿಎಂಆರ್ ಡಿಎ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದೇ ತಿಂಗಳು 17ಕ್ಕೆ ಬಿಡಿಎ ರಚನೆಯಾಗಿ 50 ವರ್ಷ ಪೂರ್ಣಗೊಳ್ಳಲಿದೆ. ಈ ಸಂಭ್ರಮಾಚರಣೆ ವೇಳೆ ಹೆಗ್ಗುರುತು ಬಿಟ್ಟು ಹೋಗಲು ನನ್ನ ಹಾಗೂ ಬಿಡಿಎ ಅಧ್ಯಕ್ಷರಾದ ಹ್ಯಾರೀಸ್ ಅವರ ತಂಡದ ಅಭಿಲಾಶೆಯಾಗಿದೆ. ಇದಕ್ಕೆ ಬಿಡಿಎನಲ್ಲಿ ಪಾರದರ್ಶಕತೆ ತರಬೇಕು. ನೊಂದ ಜನರು ಬಿಡಿಎ ಬಳಿ ಬರುತ್ತಾರೆ. ಜನ ನಿಮ್ಮ ಬಳಿಗೆ ಬಹಳ ಗೌರವಯುತವಾಗಿ ಬರುವಂತಾಗಬೇಕು” ಎಂದು ಮಾರ್ಗದರ್ಶನ ನೀಡಿದರು.

“ಕೆಲವರು ಶಿವಕುಮಾರ್ ಅವರಂತಹವರು ಈ ರೀತಿ ಮಾತನಾಡುತ್ತಾರಾ ಎಂದು ಭಾವಿಸಬಹುದು. ಅವರಿಗೆ ನಮ್ಮ ಬದುಕಿನಲ್ಲಿರುವ ಶಿಸ್ತಿನ ಬಗ್ಗೆ ಗೊತ್ತಿರುವುದಿಲ್ಲ. ನಮ್ಮ ಶ್ರಮ ಇಲ್ಲದೆ ನಾವು ಈ ಹಂತ ತಲುಪಲು ಸಾಧ್ಯವೇ? ನಾನು ಯಾರಿಗೂ ಮೆಚ್ಚಿಸುವ ಅಗತ್ಯವಿಲ್ಲ. ನಾನು ನನ್ನ ಆತ್ಮಸಾಕ್ಷಿ ಒಪ್ಪಿಸಿದರೆ ಸಾಕು. ನಾವು ಹೋಗುವಾಗ ಎಲ್ಲವನ್ನು ಹೊತ್ತುಕೊಂಡು ಹೋಗುವುದಿಲ್ಲ. ಸಮಾಜಕ್ಕೆ ಪ್ರತಿಯಾಗಿ ಕೊಡುಗೆ ನೀಡಬೇಕು. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಕೇಂಗಲ್ ಹನುಮಂತಯ್ಯ ಅವರು ವಿಧಾನಸೌಧದ ದ್ವಾರದಲ್ಲೇ ಬರೆಸಿದ್ದಾರೆ. ನಿಮ್ಮ ಬಳಿಗೆ ನಾಗರಿಕರು ಬಂದಾಗ ಆದಷ್ಟು ಸಕಾರಾತ್ಮಕವಾಗಿ ಆಲೋಚಿಸಬೇಕು. ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುತ್ತಾ ಹೋದರೆ, ಆಗುವುದಿಲ್ಲ. ಸಮಸ್ಯೆಗಳಿಗೆ ನೀವು ದಾರಿ ಹುಡುಕಬೇಕು. ಉದಾರ ಮನಸ್ಸಿನಿಂದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ. ಕಾನೂನು ಬಿಟ್ಟು ಯಾವುದೇ ಕೆಲಸ ಮಾಡಬೇಡಿ ಎಂದು ಹೇಳಿದ್ದೇನೆ. ನಿಮ್ಮಲ್ಲಿ ಅಧಿಕಾರ ಇದ್ದಾಗ ನೀವು ಬೇರೆಯವರಿಗೆ ಸಹಾಯ ಮಾಡಿ, ತೊಂದರೆ ಮಾಡಬೇಡಿ” ಎಂದು ಬುದ್ಧಿಮಾತು ಹೇಳಿದರು.

“ಇನ್ನು ಟೌನ್ ಪ್ಲಾನಿಂಗ್ ಗೆ ಸಿವಿಲ್ ಹಾಗೂ ಆರ್ಕಿಟೆಕ್ಛರ್ ಇಂಜಿನಿಯರ್ ಹೊರತಾಗಿ ಬೇರೆ ಇಂಜಿನಿಯರ್ ಗಳು ಬರುತ್ತಿದ್ದಾರೆ. ಹೀಗಾಗಿ ಕೆಂಪೇಗೌಡ ಪ್ರಾಧಿಕಾರದ ಜಾಗದಲ್ಲಿ ವಿಟಿಯು ಮೂಲಕ ಬೆಂಗಳೂರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ಆರಂಭಿಸಲು ಮುಂದಾಗಿದ್ದೇನೆ. ಮುಂದಿನ ಎಲ್ಲಾ ನಗರಗಳಲ್ಲಿ ಯೋಜನೆ ರೂಪಿಸಬೇಕು. ಕೇವಲ ಬೆಂಗಳೂರು ನಗರದ ಅಕ್ಕಪಕ್ಕ ಮಾತ್ರವಲ್ಲ ಎಲ್ಲೆಡೆ ಸಂಚಾರಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಈ ದೇಶದಲ್ಲಿ ವಿದ್ಯಾವಂತರು, ಬುದ್ದಿವಂತರಿಲ್ಲದಿದ್ದರೂ ಪ್ರಜ್ಞಾವಂತರು ಇರಬೇಕು. ಪ್ಲಾನಿಂಗ್ ವಿಚಾರದಲ್ಲಿ ಮೈಸೂರು ಬೆಂಗಳೂರಿಗಿಂತ ಉತ್ತಮವಾಗಿದೆ. ಬೆಂಗಳೂರಿನಲ್ಲಿ ಜಯನಗರ, ಮಲ್ಲೇಶ್ವರ, ಚಾಮರಾಜಪೇಟೆ ಹೊರತಾಗಿ ಬೇರೆ ಪ್ರದೇಶಗಳಲ್ಲಿ ಹೇಳಿಕೊಳ್ಳುವ ಯೋಜನೆ ರೂಪಿಸಿಲ್ಲ. ಇದಕ್ಕೆ ಕೇವಲ ನೀವು ಮಾತ್ರವಲ್ಲ, ಆಡಳಿತ ನಡೆಸುವ ರಾಜಕಾರಣಿಗಳು, ಬಿಡಿಎ ಮುನ್ನಡೆಸಿರುವ ಆಯುಕ್ತರು, ಟೌನ್ ಪ್ಲಾನರ್ ಸೇರಿದಂತೆ ಎಲ್ಲರ ತಪ್ಪು ಇದೆ. ಇದನ್ನು ಸರಿಪಡಿಸಲು ನಮ್ಮ ಮಕ್ಕಳ ಭವಿಷ್ಯ ರೂಪಿಸಬೇಕು” ಎಂದು ಕರೆ ನೀಡಿದರು.

“ಕೆಂಪೇಗೌಡರು ಬೆಂಗಳೂರ ಕಟ್ಟಿ 489 ವರ್ಷಗಳಾಗಿವೆ. 11 ವರ್ಷ ಕಳೆದರೆ 500 ವರ್ಷವಾಗುತ್ತದೆ. ಬಿಡಿಎ ರಚಿಸಿ 50 ವರ್ಷಗಳು ತುಂಬಿದೆ. ಈ ಸಂಸ್ಥೆಗೆ ಹೊಸ ರೂಪ ನೀಡಲು ಅಧ್ಯಕ್ಷರು ಆಲೋಚಿಸಿದ್ದಾರೆ. ನಾನು ಹಳ್ಳಿಯಲ್ಲಿ ಹುಟ್ಟಿದರೂ ನನ್ನ 6ನೇ ವಯಸ್ಸಿಗೆ ಬೆಂಗಳೂರಿಗೆ ಬಂದೆ. ಇಲ್ಲಿಯವರೆಗೂ ಬೆಂಗಳೂರಿನಲ್ಲೇ ಇದ್ದೀನಿ. ಇಲ್ಲಿನ ಜನರ ಶ್ರಮ, ಈ ನಗರ ಹೇಗೆ ಬೆಳೆಯುತ್ತಿದೆ ಎಲ್ಲವನ್ನು ಅರಿತಿದ್ದೇನೆ. ಈ ಹಿಂದೆ ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ಬೆಂಗಳೂರಿನ 7 ಸಿಎಂಸಿಗಳನ್ನು ಒಳಗೊಂಡಂತೆ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನನಗೆ ನನ್ನದೇ ಆದ ಅನುಭವವಿದೆ. ಬೆಂಗಳೂರಿಗೆ ಹೊಸ ರೂಪ ನೀಡಲು ಈ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಬೆಂಗಳೂರನ್ನು ಕೆಂಪೇಗೌಡರು, ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ಅವರು, ವಿಕಾಸಸೌಧ ಹಾಗೂ ಉದ್ಯೋಗ ಸೌಧವನ್ನು ಎಸ್.ಎಂ ಕೃಷ್ಣ ಅವರು ನಿರ್ಮಿಸಿದರು. ಹೊಸ ಪರಿಕಲ್ಪನೆಗೆ ಬೆಂಗಳೂರನ್ನು ತೆಗೆದುಕೊಂಡು ಹೋಗಲು ಅನೇಕ ತೀರ್ಮಾನ ಮಾಡಿದರು. ಈಗ ಜನಸಂಖ್ಯೆ ಬೆಳೆದಿದೆ. ಹ್ಯಾರೀಸ್ ಹಾಗೂ ನಾನು ಸೇರಿ ಬೆಂಗಳೂರಿಗೆ ಏನಾದರೂ ಕೊಡುಗೆ ನೀಡಲು ಅನೇಕ ಐತಿಹಾಸಿಕ ಯೋಜನೆ ಕೈಗೊಂಡಿದ್ದೇವೆ” ಎಂದರು.

“ನಿನ್ನೆ ಮಲೇಷ್ಯಾ ಡಿಸಿಎಂ ಬಂದಿದ್ದರು. ನಮ್ಮನ್ನು ಬಂದು ಭೇಟಿ ಮಾಡುವ ಎಲ್ಲಾ ವಿದೇಶಿ ನಾಯಕರು ಇಲ್ಲಿನ ಪ್ರತಿಭೆಗಳನ್ನು ಶ್ಲಾಘಿಸುತ್ತಾರೆ. ನಮ್ಮ ಬೆಂಗಳೂರಿನಲ್ಲಿ ಅತ್ಯಂತ ಪ್ರಜ್ಞಾವಂತ ಹಾಗೂ ಕೌಶಲ್ಯಭರಿತ ಮಾನವ ಸಂಪನ್ಮೂಲವಿದೆ. ಹೀಗಾಗಿ ಬೆಂಗಳೂರಿನಲ್ಲಿ ನ್ಯಾಷನಲ್ ಲಾ ಸ್ಕೂಲ್, ಬಿಇಎಲ್, ಬಿಹೆಚ್ ಇಎಲ್, ಐಟಿಐ, ಬೆಮೆಲ್ ಸೇರಿದಂತೆ ಅನೇಕ ಉದ್ಯಮಗಳನ್ನು ನೆಹರು ಅವರು ಆರಂಭಿಸಿದರು. ಜಿಂದಾಲ್, ಮಹಿಂದ್ರಾ ಸಂಸ್ಥೆಯ ಉದ್ಯಮಿಗಳು ಇಲ್ಲಿ ವ್ಯಾಸಂಗ ಮಾಡಿ ಇಂದು ದೊಡ್ಡ ಸ್ಥಾನವನ್ನು ಅಲಂಕರಿಸಿದ್ದಾರೆ. ನಮ್ಮಲ್ಲಿರುವ ತಾಂತ್ರಿಕ ಶಿಕ್ಷಣ, ನಮ್ಮಲ್ಲಿರುವ ಉದ್ಯಮಗಳು ಬೇರೆ ಕಡೆ ಇಲ್ಲ. ಇಂದು ನಮ್ಮಲ್ಲಿ 260 ಇಂಜಿನಿಯರಿಂಗ್ ಕಾಲೇಜುಗಳಿವೆ. ಪ್ರತಿ ವರ್ಷ ಲಕ್ಷಕ್ಕೂ ಹೆಚ್ಚು ಇಂಜಿನಿಯರ್ ಗಳನ್ನು ತಯಾರು ಮಾಡುತ್ತಿದ್ದೇವೆ. 70 ಮೆಡಿಕಲ್ ಕಾಲೇಜುಗಳಿವೆ. ಪ್ರಪಂಚದಲ್ಲಿ ಎಲ್ಲೇ ಹೋದರೂ ನಮ್ಮ ಪ್ರತಿಭಾವಂತರು ಅಲ್ಲಿ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ. ಈಗ ವಿದೇಶದವರು ಇಲ್ಲಿಗೆ ಬಂದು ಇಲ್ಲಿನ ಮಾನವಸಂಪನ್ಮೂಲ ಬಳಸಿಕೊಳ್ಳಲು ಇಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ” ಎಂದರು.

“ಕ್ಯಾಲಿಫೋರ್ನಿಯಾ ವಿಶ್ವದ ಸಿಲಿಕಾನ್ ವ್ಯಾಲಿ. ಅಲ್ಲಿ 13 ಲಕ್ಷ ಇಂಜಿನಿಯರಿಂಗ್ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರಿಂಗ್ ವೃತ್ತಿಪರರು ಇದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ನವರು ಇಲ್ಲಿದ್ದಾರೆ. ಹೀಗಾಗಿ ವಿಶ್ವದ ಅಗ್ರ 500 ಕಂಪನಿಗಳು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿವೆ. ಬೆಂಗಳೂರಿನಲ್ಲಿ ಉತ್ತಮ ಶಾಲೆ, ರಸ್ತೆಗಳು, ಆರೋಗ್ಯ ವ್ಯವಸ್ಥೆ ಇರಬೇಕು ಎಂದು ಕೇಳುತ್ತಾರೆ. ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಆಗಿದೆ. ಇದಕ್ಕೆ ಬೆಂಗಳೂರು ಸರಿಯಾಗಿ ಸಿದ್ಧವಾಗಿರಲಿಲ್ಲ. ಬೆಂಗಳೂರು ಯೋಜಿತ ನಗರವಲ್ಲ. ಹೀಗಾಗಿ ಬೆಂಗಳೂರನ್ನು ಹೇಗೆ ರೂಪಿಸಬೇಕು ಎಂದು ನಾವು ಆಲೋಚಿಸಬೇಕು” ಎಂದು ಕರೆ ನೀಡಿದರು.

“2010ರಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಮಾಡಲು ಮುಂದಾಗಿದ್ದರು. ನಂತರ ರಾಜಕಾರಣಿಗಳು ಹಾಗೂ ಆಯುಕ್ತರುಗಳು ಸರಿಯಾಗಿ ನಿರ್ಧಾರ ಮಾಡಿದ್ದರೆ 26 ಸಾವಿರ ಕೋಟಿಯಲ್ಲಿ ಆಗುತ್ತಿತ್ತು. ಆದರೆ ಈಗ ಎರಡೂ ರಸ್ತೆ ನಿರ್ಮಾಣಕ್ಕೆ 50 ಸಾವಿರ ಕೋಟಿ ಬೇಕಾಗುತ್ತದೆ. ಭೂಸ್ವಾಧೀನಕ್ಕೆ ಹೆಚ್ಚು ವೆಚ್ಚವಾಗುತ್ತದೆ. ಹೀಗಾಗಿ ನಾನು ಭೂ ಸಂತ್ರಸ್ತರಿಗೆ ಪರಿಹಾರ ನೀಡಲು ಅನೇಕ ಆಯ್ಕೆಗಳನ್ನು ನೀಡಿದ್ದೇವೆ. ಆಮೂಲಕ ಈ ರಸ್ತೆಯನ್ನು ಬೆಂಗಳೂರು ಬಿಸಿನೆಸ್ ಕಾರಿಡಾರ್ ಮಾಡಲು ತೀರ್ಮಾನ ಮಾಡಿದ್ದೇವೆ. ಈ ಯೋಜನೆ ವಿರುದ್ಧ ಯಾರು ಎಷ್ಟೇ ಕುಣಿಯಲಿ, ನ್ಯಾಯಾಲಯದ ಮೆಟ್ಟಿಲೇರಲಿ, ಇದಕ್ಕಿಂತ ಉತ್ತಮ ಪರಿಹಾರದ ಆಯ್ಕೆಯನ್ನು ಇಡೀ ದೇಶದಲ್ಲೇ ಯಾರು ನೀಡಲು ಸಾಧ್ಯವಿಲ್ಲ. ಯಾವುದೇ ಸಂದರ್ಭದಲ್ಲಾದರೂ ನನ್ನ ಅವಧಿಯಲ್ಲಿ ಒಂದು ಇಂಚು ಭೂಮಿಯನ್ನು ಡಿನೋಟಿಫಿಕೇಷನ್ ಮಾಡುವುದಿಲ್ಲ ಎಂದು ನಮ್ಮ ಅಧ್ಯಕ್ಷರು ಹಾಗೂ ಆಯುಕ್ತರಿಗೆ ತಿಳಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.

“ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಾಗ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಬಂದು ವಿಶ್ವದ ಅನೇಕ ನಾಯಕರು ಮೊದಲು ಬೆಂಗಳೂರಿಗೆ ಬಂದು ಆನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದರು. ಮೆಟ್ರೋ ಉದ್ಘಾಟನೆಗೆ ಬಂದ ಪ್ರಧಾನಿ ಮೋದಿ ಅವರು ಬೆಂಗಳೂರನ್ನು ಜಾಗತಿಕ ನಗರ ಎಂದು ಕರೆದರು. ಬೆಂಗಳೂರಿನಲ್ಲಿ ವಾಸಯೋಗ್ಯ ಮನೆ, ನೀರಿನ ಸಂಪರ್ಕ, ಸಂಚಾರಯುಕ್ತ ರಸ್ತೆ ನೀಡಬೇಕು. ಇದನ್ನೇ ಜನ ನಿಮ್ಮಿಂದ ಅಪೇಕ್ಷೆಪಡುತ್ತಿದ್ದಾರೆ. ಜನ ಟೀಕೆ ಮಾಡುತ್ತಾರೆ. ನನ್ನ ವಿರುದ್ಧ ವಿರೋಧ ಪಕ್ಷದವರು ಹಾಗೂ ಇತರರು ಟೀಕೆ ಮಾಡುತ್ತಿದ್ದು, ಮಾಡಲಿ. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ. ಹೀಗಾಗಿ ನಾನು ಜಿಬಿಎ ರಚಿಸಿದ್ದು, ಐದು ಪಾಲಿಕೆ ಮಾಡಿದ್ದೇನೆ. ಬೆಂಗಳೂರಿನ ಸುತ್ತಮುತ್ತ ಪ್ರದೇಶ ಬೆಳೆಯುತ್ತಿದೆ. ಅವುಗಳ ಪಟ್ಟಿ ಮಾಡುತ್ತಿದ್ದೇನೆ. ಆದಷ್ಟು ಬೇಗ ಪಾಲಿಕೆ ಚುನಾವಣೆ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *