Thursday, January 30, 2025
Menu

ಗಾಂಧೀಜಿ, ಅಂಬೇಡ್ಕರ್ ಸ್ಮರಣೆ ಹಾಗೂ ಸಂವಿಧಾನ ರಕ್ಷಣೆ ಮೂಲ ಉದ್ದೇಶ: ಡಿಸಿಎಂ ಶಿವಕುಮಾರ್

“ಗಾಂಧಿಜಿ ಹಾಗೂ ಅಂಬೇಡ್ಕರ್ ಅವರ ಸ್ಮರಣೆ ಹಾಗೂ ಸಂವಿಧಾನದ ರಕ್ಷಣೆಯ ಉದ್ದೇಶದಿಂದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಡೆಸಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ  ಸಮಾವೇಶದ ಪೂರ್ವಭಾವಿ ಸಭೆ ಹಾಗೂ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಮಾತನಾಡಿ,  ನಮ್ಮ ಜೈ ಬಾಪು, ಜೈ ಭೀಮ್ ಜೈ ಸಂವಿಧಾನ ಸಮಾವೇಶ ಇಡೀ ದೇಶಕ್ಕೆ ದೊಡ್ಡ ಸಂದೇಶ ರವಾನಿಸುವ ಸಮಾವೇಶವಾಗಿದೆ ಎಂದರು.

ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಂಡು ನೂರು ವರ್ಷ ಪೂರ್ಣಗೊಂಡಿದೆ. ಅಖಂಡ ಕರ್ನಾಟಕಕ್ಕೆ ವೇದಿಕೆ ಸಜ್ಜು ಮಾಡಿದ್ದು 1924ರಲ್ಲೇ. ಗಂಗಾಧರ ದೇಶಪಾಂಡೆ ಇದಕ್ಕೆ ಶ್ರಮ ವಹಿಸಿದ್ದರು.  ಸಂವಿಧಾನ ನಮ್ಮ ಪಾಲಿನ ಭಗವದ್ಗೀತೆ, ಕುರಾನ್ ಹಾಗೂ ಬೈಬಲ್ ಆಗಿದೆ. ಇದನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು.

ಸಂವಿಧಾನ ರಕ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ಮಲ್ಲಿಕಾರ್ಜುನ ಖರ್ಗೆ  ನೇತೃತ್ವದಲ್ಲಿ ದೇಶಕ್ಕೆ ದೊಡ್ಡ ಸಂದೇಶ ರವಾನಿಸಲು ಎಐಸಿಸಿ ಈ ಕಾರ್ಯಕ್ರಮ ರೂಪಿಸಿದೆ. ಸಮಾವೇಶವನ್ನುಜನವರಿ  21ರಂದು ನಡೆಸಲಾಗುವುದು.  ಕಿತ್ತೂರು ಕರ್ನಾಟಕ ಭಾಗದಿಂದಲೇ 75 ಸಾವಿರ ಜನರನ್ನು ಸೇರಿಸಲು ತೀರ್ಮಾನಿಸಲಾಗಿದೆ. ರಾಜ್ಯದ ಇತರ ಭಾಗಗಳಿಂದ ಸಾಂಕೇತಿಕವಾಗಿ ಜನರು ಆಗಮಿಸುತ್ತಿದ್ದಾರೆ ಎಂದರು.

21ರಂದು ಬೆಳಗ್ಗೆ 10 ಗಂಟೆಗೆ ಸರ್ಕಾರಿ ಕಾರ್ಯಕ್ರಮ ಸುವರ್ಣಸೌಧದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ  ಆಹ್ವಾನಿತರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ನಂತರ ಪಕ್ಷದ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಸಾರ್ವಜನಿಕರಿಗೂ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಈ ಸಮಾವೇಶದಲ್ಲಿ ಭಾಗವಹಿಸುವುದೇ ನಿಮ್ಮ ಇತಿಹಾಸ. ಹಿಂದೆ ಆಗಿದ್ದು ಚರಿತ್ರೆ, ಮುಂದೆ ಆಗುವುದು ಭವಿಷ್ಯ. ಇಂದು ನಿಮ್ಮ ಕೈಯಲ್ಲಿದೆ. ಈ ಕಾರ್ಯಕ್ರಮ 2028ರ ಚುನಾವಣೆಗೆ ಮುನ್ನುಡಿ ಬರೆಯಬೇಕು ಎಂದರು.

ನಾನು ಸಚಿವ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಡುವೆ ಆಯ್ಕೆ ಎದುರಾದಾಗ ನಾನು ಅಧ್ಯಕ್ಷ ಸ್ಥಾನ ಆಯ್ಕೆ ಮಾಡಿಕೊಂಡೆ ಎಂದು ಪರಮೇಶ್ವರ್ ನಿಮಗೆ ತಿರುಗೇಟು ನೀಡಿದ್ದಾರೆ ಎಂದಾಗ, ಮಲ್ಲಿಕಾರ್ಜುನ ಖರ್ಗೆ ಕೊಟ್ಟಿರುವ ಕೆಲಸ ಮಾಡಿಕೊಂಡು ಹೋಗಿ ಎಂದು ನಮಗೆಲ್ಲ ಬುದ್ದಿವಾದ ಹೇಳಿದ್ದಾರೆ. ಅವರ ಮಾತನ್ನು ನಾನೂ ಪಾಲಿಸುತ್ತೇನೆ, ಬೇರೆಯವರು ಪಾಲನೆ ಮಾಡುತ್ತಾರೆ. ಇದರ ಬಗ್ಗೆ ಚರ್ಚೆ ಅಗತ್ಯವಿಲ್ಲ. ಜನ ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

Related Posts

Leave a Reply

Your email address will not be published. Required fields are marked *