Wednesday, August 06, 2025
Menu

ಸಾರಿಗೆ ಸಚಿವರಾಗಿ ನೀವು ನೌಕರರಿಗೆ ಮಾಡಿರುವ ಮೋಸ ಮತ್ತು ದ್ರೋಹವನ್ನು ನೆನಪು ಮಾಡಿಕೊಳ್ಳಿ: ಆರ್‌ ಅಶೋಕ್‌ ವಿರುದ್ಧ ಸಿಎಂ ವಾಗ್ದಾಳಿ

ಸಾರಿಗೆ ಸಚಿವರಾಗಿ ನೀವು ಸಾರಿಗೆ ನೌಕರರಿಗೆ ಮಾಡಿರುವ ಮೋಸ ಮತ್ತು ದ್ರೋಹದ ಇತಿಹಾಸವನ್ನು ನೆನಪು ಮಾಡಿಕೊಳ್ಳಿ.  ಸಾರಿಗೆ ನೌಕರರು ಮೊದಲ ಬಾರಿ ವೇತನ‌ ಪರಿಷ್ಕರಣೆಗಾಗಿ ಮುಷ್ಕರ ನಡೆಸಿದಾಗ ಸಾರಿಗೆ ಸಚಿವ ರಾಗಿದ್ದವರು ನೀವೇ ಅಲ್ಲವೇ?  ಮೊದಲ ಬಾರಿಗೆ 15 ದಿವಸಗಳ‌ ಸುದೀರ್ಘ ಮುಷ್ಕರ ನಡೆದಾಗಲೂ ಸಾರಿಗೆ ಸಚಿವರಾಗಿ ಕೈಕಟ್ಟಿ ಕೂತು ತಮ್ಮ ಅಸಾಮರ್ಥ್ಯ ಪ್ರದರ್ಶಿಸಿದ್ದೂ ನೀವೇ ಅಲ್ಲವೇ,ನಿಮ್ಮ ಮರೆಗುಳಿತನಕ್ಕೆ ನನ್ನ ಅನುಕಂಪ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಪಕ್ಷದ ಅಧಿಕಾರದ ಅವಧಿಯಲ್ಲಿ ಸಾರಿಗೆ ನೌಕರರ ತಿಂಗಳ ವೇತನ ಹೇಗೆ ಪಾವತಿಯಾಗುತ್ತಿತ್ತು ಎಂದು ಮಾಹಿತಿ ಪಡೆದು ತಿಳಿಸುವಿರಾ, ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿ ಸಾರಿಗೆ ನೌಕರರಿಗೆ ಅರ್ಧ ಸಂಬಳ, ಈ ತಿಂಗಳ ಸಂಬಳ ಮುಂದಿನ ತಿಂಗಳು ನೀಡುತ್ತಿದ್ದಾಗ ಅಧಿಕಾರದಲ್ಲಿದ್ದದ್ದು ನಿಮ್ಮದೇ ಪಕ್ಷ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ 2012-2016 ರವರೆಗೆ ವೇತನ ಹೆಚ್ಚಳ ಮಾಡಿ ಅದನ್ನು 2012 ರಿಂದಲೇ ಪೂರ್ವಾನ್ವಯ ಆಗುವಂತೆ ಜಾರಿಗೊಳಿಸಿ ದ್ದೆವು. 2016-2020 ರವರೆಗೆ ವೇತನ ಹೆಚ್ಚಳ ಮಾಡಿದಾಗ 2016 ರಿಂದ ಜಾರಿ ಮಾಡಿದ್ದೆವು.ಆದರೆ ತಮ್ಮ‌ ಪಕ್ಷದ ಆಡಳಿತದ ಅವಧಿಯಲ್ಲಿ ಸಾರಿಗೆ ನೌಕರರು 2020ರಿಂದಲೇ ವೇತನ ಹೆಚ್ಚಳ ಮಾಡಬೇಕೆಂದು ಬೇಡಿಕೆ ಸಲ್ಲಿಸಿದ್ದರೂ 01-03-2023ರಿಂದ ಜಾರಿಗೊಳಿಸಿ (ಸರ್ಕಾರದ ಆದೇಶ ಸಂಖ್ಯೆ: ಟಿಡಿ 12 ಟಿಸಿಬಿ 2023, ಬೆಂಗಳೂರು ನೌಕರರಿಗೆ ಅನ್ಯಾಯ ಮಾಡಿದ್ದು ನೀವೇ ಅಲ್ಲವೇ ಎಂದು ಸಿಎಂ ಕುಟುಕಿದರು.

ತಮ್ಮ‌ ಪಕ್ಷದ ಅವಧಿಯಲ್ಲಿ ನೇಮಕಾತಿ ಮತ್ತು ಹೊಸ ಬಸ್ ಸೇರ್ಪಡೆ ಸ್ಥಗಿತಗೊಂಡಿತ್ತು, ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಹಣ ಪಾವತಿ, ಇತರೆ ಹೊಣೆಗಾರಿಕೆ ಹೀಗೆ ರೂ.5,900 ಕೋಟಿ ಬಾಕಿ ಇತ್ತು ಎಂಬುದರ‌ ಬಗ್ಗೆ ನಿಮಗೆ ಮಾಹಿತಿಯಿದೆಯೇ? ನಿಮ್ಮ ಪಕ್ಷದ ಅಧಿಕಾರವಾಧಿಯಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದ ನೇಮಕಾತಿಗೆ‌ ಚಾಲನೆ ನೀಡಿದವರು ನಾವು. 10,000 ಹೊಸ‌ ನೇಮಕಾತಿ ಮಾಡಿದ್ದೆವು. ಇದರಲ್ಲಿ 8 ವರ್ಷಗಳಿಂದ ಅನುಕಂಪದ ಆಧಾರದ ನೌಕರಿ ನೀಡದಿರುವ 1,000 ಮೃತರ ಅವಲಂಬಿತರು ಇದ್ದಾರೆ. 5,200 ಹೊಸ ಬಸ್ಸುಗಳ ಸೇರ್ಪಡೆ ಮಾಡಿದ್ದೇವೆ. ಕನಿಷ್ಠ ಈ ಮಾಹಿತಿಯಾದರೂ ನಿಮಗೆ ತಿಳಿದಿದೆಯೇ ಎಂದು ಕೇಳಿದರು.

ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್‌ ಮೊತ್ತ ಪಾವತಿ ಬಾಕಿ ಪಾವತಿಗಾಗಿ, ನಮ್ಮ‌ ಸರ್ಕಾರವು ರೂ.2000 ಕೋಟಿ ಹಣವನ್ನು ಬ್ಯಾಂಕ್ ಗಳಿಂದ ಸಾಲ‌ ಪಡೆಯಲು ಸಾರಿಗೆ ನಿಗಮಗಳಿಗೆ ಅವಕಾಶ ಕಲ್ಪಿಸಿ, ಅದರ ಅಸಲು ಮತ್ತು ಬಡ್ಡಿಯನ್ನು ನಮ್ಮ ಸರ್ಕಾರವೇ ಮರುಪಾವತಿ ಮಾಡುತ್ತಿದೆ. ನಿಮ್ಮ ಸರ್ಕಾರದ ಅವಧಿಯ ಸಾಧನೆ ಇದೇನಾ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ನಾನು ಖುದ್ದಾಗಿ ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದೆ. ಇದಕ್ಕಿಂತ ಮೊದಲು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರೂ ಸಂಧಾನದ ಪ್ರಯತ್ನ ಮಾಡಿದ್ದಾರೆ. ಆರ್ .ಅಶೋಕರ್ ಅವರೇ, ನಿಮ್ಮ ಪಕ್ಷದ ಅಧಿಕಾರಾವಧಿಯಲ್ಲಿ ರಚಿಸಿದ್ದ ಏಕಸದಸ್ಯ ಸಮಿತಿ ರೂ.718 ಕೋಟಿ ‌ವೇತನ‌ಪರಿಷ್ಕರಣೆ ಬಾಕಿ ನೀಡಲು ಶಿಫಾರಸು ಮಾಡಿತ್ತು. ಆದರೆ ನಿಮ್ಮ ಸರ್ಕಾರ ವೇತನ ಪರಿಷ್ಕರಣೆ ಬಾಕಿಯನ್ನು ಪಾವತಿ ಮಾಡಿರಲಿಲ್ಲ. ಆ ವೇತನ ಪರಿಷ್ಕರಣೆ ಬಾಕಿಯನ್ನು ಪಾವತಿ ಮಾಡಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.

ನಮ್ಮ ಸರ್ಕಾರದ ಈ ನಿಲುವನ್ನು ಸಾರಿಗೆ ನೌಕರರಿಗೆ ತಿಳಿಸಿ ಮುಷ್ಕರ ಕೈಬಿಟ್ಟು ಮುಂದಿನ ದಿನಗಳಲ್ಲಿ ಮಾತುಕತೆ ಮುಂದುವರಿಸಬಹುದು ಎಂದು ಮನವಿ ಮಾಡಿದ್ದರೂ ನೌಕರರ ಸಂಘಟನೆಗಳು ಮುಷ್ಕರ ಹೂಡಿವೆ.  ನಮ್ಮದು ಕಾರ್ಮಿಕರ ಪರ ಸರ್ಕಾರ, ಅವರ ಹಿತಾಸಕ್ತಿ ಕಾಪಾಡಲು ನಾವು ಬದ್ಧರಾಗಿದ್ದೇವೆ. ಭಾರತೀಯ ಜನತಾ ಪಕ್ಷ ರೈತರು ಮತ್ತು ಕಾರ್ಮಿಕರ ವಿರೋಧಿ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ ಎಂದರು.

Related Posts

Leave a Reply

Your email address will not be published. Required fields are marked *