ಅಮರನಾಥ ಗುಹೆಗೆ ವಾರ್ಷಿಕ ತೀರ್ಥಯಾತ್ರೆ ಈ ವರ್ಷ ಜುಲೈ 3ರಂದು ಆರಂಭವಾಗಲಿದೆ. ಯಾತ್ರೆಗೆ ಮುಂಗಡ ನೋಂದಣಿ ಎಪ್ರಿಲ್ 15ರಿಂದ ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳಲ್ಲಿ ಪ್ರಾರಂಭವಾಗಲಿದೆ. ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮತ್ತು ಶ್ರೀ ಅಮರನಾಥ ಶ್ರೈನ್ ಬೋರ್ಡ್ ಅಧ್ಯಕ್ಷ ಮನೋಜ್ ಸಿನ್ಹಾ ಈ ಮಾಹಿತಿನ್ನು ದೃಢಪಡಿಸಿದ್ದಾರೆ.
57 ದಿನ ನಡೆಯುವ ಯಾತ್ರೆಯು ಆಗಸ್ಟ್ 28ರ ರಕ್ಷಾಬಂಧನದಂದು ಮುಕ್ತಾಯಗೊಳ್ಳಲಿದೆ. ಜೂನ್ 29ರ ಜೇಷ್ಠ ಪೂರ್ಣಿಮೆಯಂದು ಶಿವನಿಗೆ ಪ್ರಥಮ ಪೂಜೆ ನಡೆಯಲಿದೆ. ಯಾತ್ರೆಗೆ ಮುಂಗಡ ನೋಂದಣಿ ಎಪ್ರಿಲ್ 15ರಿಂದ ಪ್ರಾರಂಭವಾಗಲಿದೆ
ಜಮ್ಮು -ಕಾಶ್ಮೀರ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯಸ್ ಬ್ಯಾಂಕ್‌ನ 554 ಶಾಖೆಗಳಲ್ಲಿ ನೋಂದಣಿ ಸೌಲಭ್ಯ ಇದೆ. ಪ್ರತಿ ಪರವಾನಗಿಗೆ ₹150 ಶುಲ್ಕ, ಅರ್ಜಿದಾರರು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಪ್ರಯಾಣದ ದಿನಾಂಕ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
ಯಾತ್ರಿಗಳಿಗೆ ಕಡ್ಡಾಯ ಆರೋಗ್ಯ ಮಾರ್ಗಸೂಚಿಗಳಿವೆ. 13 ವರ್ಷಕ್ಕಿಂತ ಕಡಿಮೆ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ವರ್ಷ ಯಾತ್ರೆಗೆ ನೋಂದಾಯಿಸಲು ಅನುಮತಿಸಿಲ್ಲ. ಆರು ವಾರಗಳಿಗಿಂತ ಹೆಚ್ಚಿನ ಗರ್ಭಿಣಿಯರಿಗೂ ಯಾತ್ರೆಗೆ ಅವಕಾಶ ಇಲ್ಲ. ಕಡ್ಡಾಯ ಆರೋಗ್ಯ ಪ್ರಮಾಣಪತ್ರ (ಎಪ್ರಿಲ್ 8 ಅಥವಾ ನಂತರ ದಿನಾಂಕದ್ದು) ಸಲ್ಲಿಸಬೇಕು. ಉಸಿರಾಟದ ತೊಂದರೆ, ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮಾ, ಹೃದಯ ಕಾಯಿಲೆ, ಕೀಲುನೋವು, ಪಾರ್ಶ್ವವಾಯು ಇತ್ಯಾದಿ ವಿವರಗಳನ್ನು ನಮೂದಿಸಬೇಕು.
ನೋಂದಾಯಿತ ಯಾತ್ರಿಕರು, ಸೇವಾ ಒದಗಿಸುವವರು, ಅಧಿಕಾರಿಗಳು, ಕೆಲಸಗಾರರು ಮತ್ತು ಪೂಜಾರಿಗಳಿಗೆ ಅಪಘಾತ ವಿಮಾ ರಕ್ಷಣೆಯನ್ನು 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಶ್ರೀನಗರ ಮತ್ತು ಜಮ್ಮುಗಳಲ್ಲಿ ಲೇಸರ್ ಮತ್ತು ಸೌಂಡ್ ಶೋ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.


