ಬೆಂಗಳೂರು: ದೇಶ, ಧರ್ಮ ಯಾವುದೇ ಆಗಿರಲಿ ಮಾನವೀಯತೆ ಮುಖ್ಯ. ಸರಪಳಿ ಕಟ್ಟಿ ನಡೆಸಿಕೊಳ್ಳುವುದು ಸರಿಯಲ್ಲ. ಇದು ಖಂಡನೀಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕನಕಪುರದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಕ್ರಮವಾಗಿ ನೆಲೆಸಿದ್ದಾರೆ ಎಂದು ಕೆಲವು ಭಾರತೀಯರನ್ನು ಅಮೆರಿಕ ಸರ್ಕಾರ ಕೈ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಭಾರತಕ್ಕೆ ವಾಪಸ್ ಕಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದರು.
“ಈ ಹಿಂದೆ ಕೂಲಿ ಕಾರ್ಮಿಕರಿಗೆ ಸರಪಳಿ ಹಾಕಿ ಕಟ್ಟುತ್ತಿದ್ದದ್ದನ್ನು ನಾವು ನೋಡಿದ್ದೇವೆ. ಅದನ್ನು ತಪ್ಪಿಸಲು ಸರ್ಕಾರ ಕಾನೂನು ತಂದು ಶಿಕ್ಷೆ ನೀಡಿದೆ. ಆದರೆ ಮುಂದುವರಿದ, ಜಾಗೃತಿ ಇರುವ ದೇಶಗಳಲ್ಲಿ ಈ ರೀತಿ ನಡೆದಿರುವುದು ಖಂಡನೀಯ. ಅಕ್ರಮವಾಗಿ ಅವರ ದೇಶದಲ್ಲಿ ನೆಲೆಸಿದ್ದರೆ, ಅದಕ್ಕೆ ಯಾವ ಶಿಕ್ಷೆ ನೀಡಬೇಕೋ ನೀಡಲಿ. ಅದನ್ನು ಬಿಟ್ಟು, ಈ ರೀತಿ ಖೈದಿಗಳಿಗೆ ಹಾಕಿದಂತೆ ಸರಪಳಿ ಹಾಕಿರುವುದನ್ನು ಯಾರಿಂದಲೂ ಒಪ್ಪಲು ಸಾಧ್ಯವಿಲ್ಲ. ಇದು ಮಾನವ ಕುಲಕ್ಕೆ ಅಗೌರವ” ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಭೇಟಿ ಮಾಡಲು ಅವರು ವಿತ್ತ ಸಚಿವರೇ?
ಕೇಂದ್ರದಿಂದ ಅನುದಾನ ತರಲು ರಾಜ್ಯದ ಸಚಿವರು ನಮ್ಮ ಜತೆ ಚರ್ಚೆ ಮಾಡುವುದಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, “ಮಿಸ್ಟರ್ ಕುಮಾರಸ್ವಾಮಿ ನಿಮಗೆ ಜವಾಬ್ದಾರಿ ಇಲ್ಲವೇ? ಸಚಿವರು ನಿಮ್ಮ ಜತೆ ಚರ್ಚೆ ಮಾಡಬೇಕೆ? ಈ ರಾಜ್ಯಕ್ಕೆ ಜವಾಬ್ದಾರಿ ನೀಡಬೇಕು ಎಂದು ನಿಮಗೆ ಜವಾಬ್ದಾರಿ ಇಲ್ಲವೇ? ನಾವು ಪ್ರಧಾನಿ ಹಾಗೂ ಹಣಕಾಸು ಸಚಿವೆ ಹಾಗೂ ನಮಗೆ ಸಂಬಂಧಿಸಿದ ಇಲಾಖೆಯ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇವೆ. ಕುಮಾರಸ್ವಾಮಿ ಭೇಟಿ ಮಾಡಲು ಅವರು ವಿತ್ತ ಸಚಿವರಲ್ಲ. ಅವರಿಗೆ ರಾಜ್ಯದ ಬಗ್ಗೆ ಆಸಕ್ತಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ. ಅವರಿಗೆ ಅವರ ವೈಯಕ್ತಿಕ ಆಸಕ್ತಿ ಹೊರತಾಗಿ ರಾಜ್ಯದ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ರಾಜ್ಯ ಹಾಗೂ ದೇಶದ ಅಭಿವೃದ್ಧಿ ಬಗ್ಗೆ ಅವರಲ್ಲಿ ನಾನು ಆಸಕ್ತಿ ನೋಡಿಲ್ಲ” ಎಂದು ತಿರುಗೇಟು ನೀಡಿದರು.
ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ನನ್ನನ್ನು ಭೇಟಿ ಮಾಡುತ್ತಾರೆ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ನನ್ನನ್ನು ಭೇಟಿ ಮಾಡುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಕೇಳಿ” ಎಂದರು.
ನವೆಂಬರ್ ನಲ್ಲಿ ಸಿಎಂ ಬದಲಾವಣೆ ಖಚಿತ ಎಂಬ ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅಶೋಕ್ ಅವರು ಜ್ಯೋತಿಷ್ಯ ಕಲಿಯುತ್ತಿರುವ ಬಗ್ಗೆ ಕೇಳಿ ಬಹಳ ಸಂತೋಷವಾಯಿತು. ನನಗೂ ಜ್ಯೋತಿಷ್ಯ ಕೇಳುವ ಚಟ ಇದೆ. ಅವರು ಬಿಡುವಿನ ಸಮಯ ನೀಡಿದಾಗ ನಾನು ಹೋಗಿ ಶಾಸ್ತ್ರ ಕೇಳುತ್ತೇನೆ” ಎಂದರು.
ಯಾರ ಹಣೆಯಲ್ಲಿ ಏನು ಬರೆದಿದೆ ಯಾರಿಗೆ ಗೊತ್ತು:
ಡಿ.ಕೆ. ಸುರೇಶ್ ಅವರು ಬಮೂಲ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ ಎಂದು ಕೇಳಿದಾಗ, “ಅವೆಲ್ಲಾ ಸುದ್ದಿ. ನಾನು ಮುಂಚೆಯಿಂದಲೂ ಹಸು ಕಟ್ಟಿದ್ದೆ, ನಮ್ಮ ತಾಯಿ ಹಾಲು ಹಾಕುತ್ತಿದ್ದರು. ಹಾಲು ಹಾಕಿದಾಕ್ಷಣ ಚುನಾವಣೆಯಲ್ಲಿ ಸ್ಪರ್ಧಿಸಬೇಕಾ? ಅದರ ಜತೆಗೆ ಹತ್ತಾರು ಎಕರೆ ರೇಷ್ಮೆ, ನೂರಾರು ಎಕರೆ ವ್ಯವಸಾಯ ಮಾಡುತ್ತಿದ್ದೇವೆ. ಕನಕಪುರದ ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲು, ಇಲ್ಲಿನ ರೇಷ್ಮೆಯನ್ನು ಬಳಸಲು ನಮ್ಮ ಮಾವ ಅವರ ರೀಲಿಂಗ್ ಕಾರ್ಖಾನೆಯನ್ನು ಮಾಡಲು ಮುಂದಾಗಿದ್ದೇವೆ. ಯಾರ ಹಣೆಯಲ್ಲಿ ಏನು ಬರೆದಿದೆಯೋ ಯಾರಿಗೆ ಗೊತ್ತು? ಈ ಬಗ್ಗೆ ಚರ್ಚೆ ಮಾಡಿದರೆ ಮಾಡಿಕೊಳ್ಳಲಿ, ನೆಮ್ಮದಿ ಕೆಡಿಸಿಕೊಳ್ಳಲಿ” ಎಂದು ಹೇಳಿದರು.