ಬೆಂಗಳೂರು: ಒಳಮೀಸಲಾತಿ ಪ್ರಕ್ರಿಯೆ ಮುಗಿದ ಬಳಿಕ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶುರು ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸೋಮವಾರ ಜೆಡಿಎಸ್ ಸದಸ್ಯ ಭೋಜೇಗೌಡ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿದೆ. 6ರಿಂದ 10ನೇ ತರಗತಿಗೆ ದೈಹಿಕ ಶಿಕ್ಷಣ ಒಂದು ವಿಷಯವಾಗಿ ಸೇರಿಸಬೇಕು ಎಂದು 2006-07ರಲ್ಲಿ ವರದಿಯನ್ನ ಸರ್ಕಾರ ಒಪ್ಪಿದೆ ಎಂದರು.
ಶೇ.80ರಷ್ಟು ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇಲ್ಲ. ದೈಹಿಕ ಶಿಕ್ಷಕರಿಲ್ಲದೆ ಫಿಟ್ ಇಂಡಿಯಾ, ಖೇಲೋ ಇಂಡಿಯಾ ಹೇಗೆ ಆಗುತ್ತದೆ. ಸಮಾರೋಪಾದಿಯಲ್ಲಿ ದೈಹಿಕ ಶಿಕ್ಷಕರ ನೇಮಕ ಆಗಬೇಕು. ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆಗೂ ಅತಿಥಿ ಶಿಕ್ಷಕರನ್ನ ನೇಮಕ ಮಾಡಿಕೊಳ್ಳಿ ಎಂದು ಅವರು ಒತ್ತಾಯಿಸಿದರು.
ಸಚಿವ ಮಧು ಬಂಗಾರಪ್ಪ ಉತ್ತರಿಸಿ, ದೈಹಿಕ ಶಿಕ್ಷಕರ ಕೊರತೆ ಇರುವುದು ಸತ್ಯ. ಈಗ ಆಗುವ ನೇಮಕಾತಿಯಲ್ಲಿ ಹೆಚ್ಚು ಪ್ರಾಮುಖ್ಯತೆ ದೈಹಿಕ ಶಿಕ್ಷಕರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಳಮೀಸಲಾತಿ ಪ್ರಕ್ರಿಯೆ ಮುಗಿದ ಕೂಡಲೇ ನೇಮಕಾತಿ ಪ್ರಕ್ರಿಯೆ ಶುರು ಮಾಡ್ತೀವಿ. ದೈಹಿಕ ಶಿಕ್ಷಕ ಹುದ್ದೆಗೆ ಅತಿಥಿ ಶಿಕ್ಷಕರ ನೇಮಕ ಮಾಡುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.