ಬೆಂಗಳೂರು: ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನದ ಪಾಲು ಪ್ರಸ್ತುತ ಶೇ.75 ರಿಂದ ಶೇ.85ಕ್ಕೆ ಏರಿದ್ದು, ಆಗಸ್ಟ್ 18ರಂದು ನವೀಕರಿಸಬಹುದಾದದ ಇಂಧನ ಮೂಲಗಳಿಂದ 143 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ.
ಇತ್ತೀಚಿನ ದಿನಗಳಲ್ಲಿ ಉಷ್ಣ, ಜಲ ವಿದ್ಯುತ್‌ನಂಥ ಸಾಂಪ್ರದಾಯಿಕ ಇಂಧನದ ಅವಲಂಬನೆ ಕಡಿತಗೊಂಡಿದ್ದು, ನವೀಕರಿಸಬಹುದಾದದ ಇಂಧನ ಮೂಲಗಳಿಂದ ಆಗಸ್ಟ್ 18ರಂದು 143 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾನೆಯಿಂದಾಗಿ ಗ್ರಿಡ್‌ಗೆ ಶೇ.80ರಷ್ಟು ಹಸಿರು ಇಂಧನ ಪೂರೈಕೆಯಾಗಿದೆ. ಇದು ನವೀಕರಿಸಬಹುದಾದ ಇಂಧನ ಮೂಲಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ.
ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆ ಸಾಕಷ್ಟು ಹೆಚ್ಚಾಗಿದೆ. ಬೇಡಿಕೆಯ ಶೇ.75ರಿಂದ ಶೇ.85 ರಷ್ಚು ವಿದ್ಯುತ್ ಈ ಮೂಲಗಳಿಂದಲೇ ಉತ್ಪಾದನೆಯಾಗುತ್ತಿದೆ. ಅದರಲ್ಲೂ, ಪವನ ವಿದ್ಯುತ್ ಉತ್ಪಾದನೆ ಗಣನೀಯವಾಗಿ ಹೆಚ್ಚಳ ಕಂಡಿದ್ದು, ಪ್ರಸ್ತುತ ದಿನಕ್ಕೆ ಸರಾಸರಿ 54 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆದ್ಯತೆ ನೀಡುವ ರಾಜ್ಯ ಸರ್ಕಾರದ ಕಾರ್ಯತಂತ್ರದಿಂದಾಗಿ ಈ ಬೆಳವಣಿಗೆ ಸಾಧ್ಯವಾಗಿದೆ. ಇತರೆ ರಾಜ್ಯಗಳೂ ಹಸಿರು ಇಂಧನ ಪರಿವರ್ತನೆಗೆ ಮುಂದಡಿ ಇಡಲು ಈ ಉಪಕ್ರಮ ಮಾದರಿಯಾಗಿದೆ. ಇದಲ್ಲದೆ, ನವೀಕರಿಸಬಹುದಾದ ಇಂಧನ ಮೂಲಗಳ ವಿದ್ಯುತ್ ಕಡಿಮೆ ದರಕ್ಕೆ ದೊರೆಯುವುದರಿಂದ ಸರ್ಕಾರದ ಮೇಲಿನ ಹೊರೆಯೂ ಕಡಿಮೆಯಾಗುವಂತಾಗಿದೆ.
ಪ್ರಸ್ತುತ ವರ್ಷ ಪವನ ವಿದ್ಯುತ್ ಉತ್ಪಾದನೆಯಲ್ಲಿ ದಾಖಲೆ ಬರೆಯಲಾಗಿದೆ. ಮುಂಗಾರು ಆರಂಭವಾದ ಮೇಲೆ ಪ್ರತಿನಿತ್ಯ ಸರಾಸರಿ 50 ಮಿಲಿಯನ್ ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಈ ಮೂಲಗಳಿಂದ ಉತ್ಪಾದನೆಯಾಗಿದೆ. ಪ್ರಸ್ತುತ 65.80 ಮಿಲಿಯನ್ ಯೂನಿಟ್ ಪವನ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಿಂದಾಗಿ ಜಲ ವಿದ್ಯುತ್ ಮತ್ತು ಉಷ್ಣ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗಿದೆ. ರಾಜ್ಯದ ಒಟ್ಟಾರೆ ವಿದ್ಯುತ್ ಉತ್ಪಾದನೆಯಲ್ಲಿಉಷ್ಣ ವಿದ್ಯುತ್ ಪಾಲು ಶೇ.15-ಶೇ.25.
ಇಳಿಕೆಯಾದ ವಿದ್ಯುತ್ ಬೇಡಿಕೆ
ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿದ್ಯುತ್ ಬಳಕೆ ಪ್ರಮಾಣ ನಿರೀಕ್ಷೆಗೂ ಮೀರಿ ಇಳಿಮುಖವಾಗಿದ್ದು, ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ ಬಳಕೆ 179.03 ದಶಲಕ್ಷ ಯೂನಿಟ್ (ಮಿಲಿಯನ್ ಯೂನಿಟ್ )ಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಾಜ್ಯದ ವಿದ್ಯುತ್ ಬಳಕೆ 200.35 ಮಿಲಿಯನ್ ಯೂನಿಟ್ ಇತ್ತು. ಈ ವರ್ಷ ಸರಾಸರಿ ವಿದ್ಯುತ್ ಬಳಕೆ ಪ್ರಮಾಣ ಹಿಂದಿನ ವರ್ಷಕ್ಕಿಂತ ಶೇ. 15ರಿಂದ 15ರಷ್ಟು ಹೆಚ್ಚಿದ್ದರೂ ಪ್ರಸ್ತುತ 21 ದಶಲಕ್ಷ ಯೂನಿಟ್‌ಗಳಷ್ಟು ಕಡಿಮೆ ವಿದ್ಯುತ್ ಬಳಕೆಯಾಗುತ್ತಿದೆ.
ರಾಜ್ಯದಲ್ಲಿ ಜನವರಿ ಅಂತ್ಯದ ವೇಳೆಗೆ ವಿದ್ಯುತ್ ಬೇಡಿಕೆ ಹೆಚ್ಚಾಗಲು ಆರಂಭವಾಯಿತು. ಬೇಸಿಗೆಯಲ್ಲಿ ದೈನಂದಿನ ಬಳಕೆ 350 ಮಿಲಿಯನ್ ಯೂನಿಟ್‌ಗಳನ್ನು ಮೀರುವ ನಿರೀಕ್ಷೆಯಿತ್ತಾದರೂ ಮುಂಗಾರು ಪೂರ್ವ ಮಳೆಯಿಂದ ಬೇಡಿಕೆ 320–330 ಮಿಲಿಯನ್ ಯೂನಿಟ್‌ಗಳ ವ್ಯಾಪ್ತಿಯಲ್ಲಿಯೇ ಇತ್ತು. ಮೇ 16–17ರ ಸುಮಾರಿಗೆ ಪೂರ್ವ ಮುಂಗಾರು ಮಳೆ ಮತ್ತು ನಿಗದಿಗಿಂತ ಮುನ್ನ ಮುಂಗಾರು ಪ್ರವೇಶಿಸಿದ್ದರಿಂದ ವಿದ್ಯುತ್ ಬೇಡಿಕೆ ಕಡಿಮೆಯಾಗಿ ದಿನಕ್ಕೆ 230–240 ಮಿಲಿಯನ್ ಯೂನಿಟ್‌ಗಳಿಗೆ ಇಳಿಯಿತು. ಇದೀಗ ಕನಿಷ್ಟ ಮಟ್ಟಕ್ಕೆ ಬಂದಿದೆ.
ವಿದ್ಯುತ್ ಬೇಡಿಕೆ ಕಡಿಮೆಯಾಗುವುದರ ಜತೆಗೆ ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿದ್ದರಿಂದ ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಖರೀದಿಸುತ್ತಿದ್ದ ವಿದ್ಯುತ್ ಪ್ರಮಾಣವೂ ಕುಸಿದಿದೆ. ಇದರಿಂದಾಗಿ ವಿದ್ಯುತ್ ಖರೀದಿಗೆ ಸರ್ಕಾರ ಮಾಡುವ ವೆಚ್ಚವೂ ಇಳಿಮುಖವಾಗಿದೆ.