ಮುಂಬೈ: ಜಿದ್ದಾಜಿದ್ದಿನ ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್,ಶಿಸ್ತಿನ ದಾಳಿ ಹಾಗೂ ಚುರುಕಿನ ಕ್ಷೇತ್ರರಕ್ಷಣೆಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ರನ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿದೆ. ಇದೇ ವೇಳೆ ಮುಂಬೈನಲ್ಲಿ 10 ವರ್ಷಗಳ ನಂತರ ಗೆಲುವು ದಾಖಲಿಸಿ ಮತ್ತೊಂದು ಚಾರಿತ್ರಿಕ ಸಾಧನೆ ಮಾಡಿದೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಆಹ್ವಾನ ಪಡೆದ ಆರ್ ಸಿಬಿ ಸಿಕ್ಕ ಅವಕಾಶವನ್ನು ಬಾಚಿಕೊಂಡು 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 221 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 209 ರನ್ ಗಳಿಸಲಷ್ಟೇ ಶಕ್ತವಾಯಿತು.
18ನೇ ಆವೃತ್ತಿಯಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಆರ್ ಸಿಬಿ ಚೆನ್ನೈ ನೆಲದಲ್ಲಿ 17 ವರ್ಷಗಳ ನಂತರ ಮೊದಲ ಗೆಲುವು ದಾಖಲಿಸಿದರೆ, ಇದೀಗ ಮುಂಬೈ ನೆಲದಲ್ಲಿ 10 ವರ್ಷಗಳ ನಂತರ ಗೆದ್ದು ಮತ್ತೊಂದು ದಾಖಲೆ ಬರೆದಿದೆ. ಆರ್ ಸಿಬಿ ಆಡಿದ 4 ಪಂದ್ಯಗಳಲ್ಲಿ ತವರಿನಲ್ಲಿ ಅನುಭವಿಸಿದ ಒಂದು ಸೋಲು ಹಾಗೂ 3 ಗೆಲುವಿನೊಂದಿಗೆ 6 ಅಂಕದೊಂದಿಗೆ 3ನೇ ಸ್ಥಾನದಲ್ಲಿ ಉಳಿಯಿತು.
ಕಠಿಣ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್ ಆರಂಭದಿಂದಲೇ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಇದರಿಂದ 99 ರನ್ ಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಸಿಡಿಲಬ್ಬರದ ಆಟದಿಂದ 87 ರನ್ ಜೊತೆಯಾಟದಿಂದ ಪಂದ್ಯಕ್ಕೆ ರೋಚಕ ತಿರುವು ನೀಡಿದರು.
ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 42 ರನ್ ಸಿಡಿಸಿದರೆ, ತಿಲಕ್ ವರ್ಮಾ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 56 ರನ್ ಗಳಿಸಿದರು. ಇವರಿಬ್ಬರು ಒಬ್ಬರ ನಂತರ ಒಬ್ಬರ ಔಟಾದ ನಂತರ ಮತ್ತೆ ಆರ್ ಸಿಬಿ ಕಡೆ ವಾಲಿತು.
ಕೊನೆಯ ಓವರ್ ನಲ್ಲಿ 19 ರನ್ ಬೇಕಿದ್ದಾಗ ಸ್ಪಿನ್ನರ್ ಕೃನಾಲ್ ಪಾಂಡ್ಯ 3 ಸೇರಿದಂತೆ 4 ವಿಕೆಟ್ ಪಡೆದು ಮಿಂಚಿದರೆ, ಯಶ್ ದಯಾಲ್ ಮತ್ತು ಜೋಶ್ ಹಾಜೆಲ್ ವುಡ್ ತಲಾ 2 ವಿಕೆಟ್ ಪಡೆದರು.
ಕೊಹ್ಲಿ, ರಜತ್ ಅರ್ಧಶತಕ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಮತ್ತು ರಜತ್ ಪಟಿದಾರ್ ಸಿಡಿಸಿದ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿತು.
ಆರ್ ಸಿಬಿ ಎರಡನೇ ಎಸೆತದಲ್ಲೇ ಫಿಲ್ ಸಾಲ್ಟ್ (4) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಎರಡನೇ ವಿಕೆಟ್ ಗೆ 91 ರನ್ ಜೊತೆಯಾಟದಿಂದ ಭದ್ರ ಬುನಾದಿ ಹಾಕಿಕೊಟ್ಟರು. ಹೊಡಿಬಡಿ ಆಟದಿಂದ ಗಮನ ಸೆಳೆದ ದೇವದತ್ ಪಡಿಕಲ್ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿ ಔಟಾದರು.
ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದಂತೆ 67 ರನ್ ಸಿಡಿಸಿದರು. ನಾಯಕ ರಜತ್ ಪಟಿದಾರ್ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 64 ರನ್ ಚಚ್ಚಿದ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.
ಲಿಯಾಮ್ ಲಿವಿಂಗ್ ಸ್ಟನ್ (0) ನಿರಾಸೆ ಮೂಡಿಸಿದರೂ ನಂತರ ಬಂದ ಜಿತೇಶ್ ಕುಮಾರ್ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 40 ರನ್ ಪೇರಿಸಿ ತಂಡದ ಮೊತ್ತ 200ರ ಗಡಿ ತಲುಪಲು ನೆರವಾದರು.
ಗಾಯದ ನಂತರ ಚೇತರಿಸಿಕೊಂಡು ಇದೇ ಮೊದಲ ಬಾರಿಗೆ ಅಖಾಡಕ್ಕೆ ಇಳಿದ ಜಸ್ ಪ್ರೀತ್ ಬುಮ್ರಾ ಯಾವುದೇ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದರು, ಟ್ರೆಂಟ್ ಬೌಲ್ಟ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರು. ಆದರೆ ಬಹುತೇಕ ಬೌಲರ್ ಗಳು ದುಬಾರಿ ಎನಿಸಿಕೊಂಡರು.