Menu

ಆರ್‌ಸಿಬಿ ವಿಜಯೋತ್ಸವ ದುರಂತ: ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆ ಅರೆಸ್ಟ್‌

ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿಯ ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಸೋಸಲೆ ಮುಂಬೈಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ವಿಕ್ಟರಿ ಪರೇಡ್ ನಡೆಯಲಿದೆ ಎಂದು ಆರ್‌ಸಿಬಿಯ ಸಾಮಾಜಿಕ ಜಾಲತಾಣ ಖಾತೆಯಿಂದ ಪೋಸ್ಟ್‌ ಮಾಡಲಾಗಿತ್ತು. ಬೆಂಗಳೂರು ಪೊಲೀಸರ ಅನುಮತಿ ಪಡೆಯದೆ ಬುಧವಾರ ಬೆಳಗ್ಗೆ ಈ ಪೋಸ್ಟ್‌ ಪ್ರಕಟಿಸಲಾಗಿತ್ತು. ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಪರೇಡ್‌ಗೆ ಅನುಮತಿ ನಿರಾಕರಿಸಿದ ನಂತರವೂ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್‌ ಡಿಲೀಟ್‌  ಮಾಡಿರಲಿಲ್ಲ.

ವಿಜಯೋತ್ಸವ ಆಚರಣೆಗೆ ಉಚಿತ ಟಿಕೆಟ್‌ ಎಂದು ಪೋಸ್ಟ್‌ ಮಾಡಲಾಗಿತ್ತು. ಟಿಕೆಟ್‌ ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ಇರಲಿಲ್ಲ. ನಂತರ ಗೇಟ್‌ 9 ಮತ್ತು 10 ರ ಬಳಿ ಮಧ್ಯಾಹ್ನ 1 ಗಂಟೆಯ ನಂತರ ಟಿಕೆಟ್‌ ಸಿಗಲಿದೆ ಎಂದು ಘೋಷಣೆ ಮಾಡಲಾಗಿತ್ತು. ಮಧ್ಯಾಹ್ನ 1 ಗಂಟೆಯಾದರೂ ಟಿಕೆಟ್‌ ವಿತರಣೆ ಪ್ರಕ್ರಿಯೆ ನಡೆದಿರಲಿಲ್ಲ. ಮಧ್ಯಾಹ್ನ 3:14ಕ್ಕೆ ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ ಸಿಗಲಿದೆ ಎಂದೂ ಪೋಸ್ಟ್‌ ಮಾಡಲಾಗಿತ್ತು.

ಸೋಸಲೆ ಸೂಚನೆಯಂತೆ ಇವೆಂಟ್‌ ಮ್ಯಾನೆಜ್‌ಮೆಂಟ್‌ ಕಂಪನಿಯೊಂದು ಕೆಲಸ ಮಾಡುತ್ತಿತ್ತು. ಸಂಜೆ ದಿಢೀರ್‌ ಆಗಿ 22 ಗೇಟ್‌ಗಳಲ್ಲಿ 19, 20 ,22 (ಮೂರು) ಗೇಟ್‌ಗಳನ್ನು ಮಾತ್ರ ಒಪನ್‌ ಮಾಡಲಾಗಿತ್ತು, ಹೀಗಾಗಿ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದರು.

Related Posts

Leave a Reply

Your email address will not be published. Required fields are marked *