ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಸಂಭವಿಸಿರುವ ಸಾವುಗಳಿಗೆ ಸರ್ಕಾರವೇ ನೇರ ಹೊಣೆ, 11 ಜನ ಮೃತಪಟ್ಟಿರುವುದು ದುಃಖದ ಸಂಗತಿ. ವಿಜಯೋ ತ್ಸವ ನಿಯಂತ್ರಣ ಮಾಡಲಿಕ್ಕೆ ಆಗಲಿಲ್ಲ ಅಂದರೆ ಇಡೀ ಕರ್ನಾಟಕದ ಜನರ ರಕ್ಷಣೆ ಮಾಡ್ತೀರಾ, ಇದು ಅನಿರೀಕ್ಷಿತ ಅಲ್ಲ, ನೀವು ಪ್ಲಾನಿಂಗ್ ಮಾಡಿಲ್ಲ. ಬೇಜವಾ ಬ್ದಾರಿಯ ಪರಮಾವಧಿ. ಸಿಎಂ, ಕೆಸಿಎ ಅನ್ನುವುದು ಎಷ್ಟು ಸರಿ, ಸೆಕ್ಯುರಿಟಿ ಯಾರು ಕೊಡಬೇಕು, ಹಿರಿಯ ಪೊಲೀಸ್ ಅಧಿಕಾರಿಗಳು ಸುಮ್ಮನೆ ಇದ್ದರು, ಸರ್ಕಾರ ಸಂಪೂರ್ಣ ನಿಷ್ಕ್ರಿಯ ಆಗಿದೆ. ಈ ದುರಂತದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ರಾಜ್ಯ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಕಾಲ್ತುಳಿತದಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ಜನರನ್ನು ಭೇಟಿಯಾಗಿ ಬಿಜೆಪಿ ನಾಯಕರು ಆರೋಗ್ಯ ವಿಚಾರಿಸಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದರಾದ ಪಿ.ಸಿ.ಮೋಹನ್, ಡಾ. ಕೆ.ಸುಧಾಕರ್, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಫಂಕ್ಷನ್ ಮಾಡದೆ ರೋಡ್ ಶೋ ಮಾಡಬೇಕಿತ್ತು. ಈ ದುರಂತದಲ್ಲಿ ಗೃಹ ಸಚಿವರ ಪಾತ್ರ ಕಾಣಿಸ್ತಾ ಇಲ್ಲ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಚೇಲಾಗಳೇ ತುಂಬಿ ಹೋಗಿದ್ದರು. ನಾಚಿಕೆ, ಮರ್ಯಾದೆ ಇದ್ದರೆ ಸಂಬಂಧಪಟ್ಟವರು ರಾಜೀನಾಮೆ ನೀಡಬೇಕು. ತನಿಖೆ ಘಟನೆಯ ಬಗ್ಗೆ ಅಲ್ಲ, ಪೂರ್ವ ಯೋಜನೆ ವೈಫಲ್ಯದ ಬಗ್ಗೆ ಆಗಬೇಕು. ಎಲ್ಲಿ ಹಿರಿಯ ಅಧಿಕಾರಿಗಳು ವೈಫಲ್ಯ ಆಗಿದ್ದಾರೆ, ಯಾವ ರಾಜಕಾರಣಿ ಪಾತ್ರ ಇದೆ ಎಂಬ ಬಗ್ಗೆ ತಿಳಿಯಬೇಕೆಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಹಬ್ಬದ ವಾತಾವರಣ ಹೋಗಿ, ಸೂತಕದ ವಾತಾವರಣ ಆಗಿದೆ. ಸಮಯೋಚಿತ ನಿರ್ಧಾರ ಮಾಡದೆ ಬೇಜವಬ್ದಾರಿಯಿಂದ ಸರ್ಕಾರ ನಡೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು. ಇಂಟಲಿಜೆನ್ಸ್ ಏನು ಮಾಡುತ್ತಿತ್ತು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಈ ಘಟನೆಯ ಸೂಕ್ತ ತನಿಖೆ ಆಗಬೇಕು. ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಬೇಕುಎಂದು ಆಗ್ರಹಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರು ಒಪ್ಪಿಗೆ ನೀಡಿರಲಿಲ್ಲ
ಸಿದ್ಧತೆ ಇಲ್ಲದೆ ಕಾರ್ಯಕ್ರಮ ನಡೆಸಿದರೆ ನಿಯಂತ್ರಣ ಮಾಡುವುದು ಕಷ್ಟ ಎಂದು ಪೊಲೀಸರು ತಿಳಿಸಿದ್ದರೂ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪಟ್ಟು ಹಿಡಿದು ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ಕಾಲ್ತುಳಿತ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ವಿಧಾನಸೌಧದ ಮುಂದೆ ಜನ ಸೇರಿಸಲು ನಗರ ಪೊಲೀಸ್ ಆಯುಕ್ತರು ಒಪ್ಪಿಗೆ ನೀಡಿರಲಿಲ್ಲ. ಬಂದೋಬಸ್ತ್ ಮಾಡಿಕೊಳ್ಳದೆ ಏಕಾಏಕಿ ಭಾರೀ ಸಂಖ್ಯೆಯಲ್ಲಿ ಜನರಿಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.
ಏನಾದರೂ ಹೆಚ್ಚು ಕಡಿಮೆಯಾದರೆ ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಬೇಕಿದ್ದರೆ ಪೂರ್ವ ಸಿದ್ಧತೆ ಮಾಡಿಕೊಂಡು ಭಾನುವಾರ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಬಹುದು ಎಂದು ಸಭೆಯಲ್ಲಿ ಸಲಹೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಭಾನುವಾರ ಬಹಳ ದಿನ ಆಗುತ್ತದೆ. ವಿದೇಶಿ ಆಟಗಾರರು ಅವರ ದೇಶಕ್ಕೆ ತೆರಳುತ್ತಾರೆ. ಹೀಗಾಗಿ ಬುಧವಾರವೇ ಕಾರ್ಯಕ್ರಮ ನಡೆಸಬೇಕು ಎಂದು ಕೆಎಸ್‌ಸಿಎ ಪಟ್ಟು ಹಿಡಿದಿದೆ. ಸರ್ಕಾರದ ಒತ್ತಡ ಇದ್ದ ಕಾರಣ ಪೊಲೀಸ್ ಇಲಾಖೆ ಯಾವುದೇ ಸಿದ್ಧತೆ ನಡೆಸದೇ ಅನುಮತಿ ನೀಡಿದ್ದರಿಂದ ಈ ದುರಂತ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಪಾಸ್ ಪ್ರಿಂಟ್ ಮಾಡಿ ನೀಡದೆ ಮೊದಲು ಬಂದವರಿಗೆ ಆದ್ಯತೆ ಎಂದು ಹೇಳಿದ್ದರಿಂದ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.