ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟು, 42 ಮಂದಿ ಗಾಯಗೊಂಡಿರುವ ಪ್ರಕರಣದ ಕುರಿತು ಆಮ್ ಆದ್ಮಿ ಪಕ್ಷದ ಕರ್ನಾಟಕ ವಿಭಾಗದ ಯುವ ಅಧ್ಯಕ್ಷ ವಕೀಲ ಲೋಹಿತ್ ಹನುಮಪುರ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಿದ್ದಾರೆ.
ಈ ಘಟನೆಯಲ್ಲಿ ಅಮಾಯಕ ಕ್ರಿಕೆಟ್ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷ್ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಇಲ್ಲಿ ಕಾಣಿಸುತ್ತಿದೆ. ಜನರ ಗುಂಪು ನಿಯಂತ್ರಿಸುವಲ್ಲಿ ವಿಫಲವಾದ ಕಾರಣ ಈ ದುರಂತ ಸಂಭವಿಸಿದೆ. ಕ್ರಿಕೆಟ್ ಅಸೋಸಿಯೇಷನ್, ಚಿನ್ನಸ್ವಾಮಿ ಕ್ರೀಡಾಂಗಣದ ಅಧಿಕಾರಿಗಳು ಮತ್ತು ಕಾರ್ಯನಿರ್ವಹಣಾಧಿಕಾರಿಯೇ ಹೊಣೆ ಎಂದಿದ್ದಾರೆ.
ತಪ್ಪಿತಸ್ಥರ ವಿರುದ್ಧ ಹೊಣೆಗಾರಿಕೆ ನಿಗದಿಪಡಿಸದೆ ಪ್ರಕರಣವನ್ನು ಮುಕ್ತಾಯಗೊಳಿಸಬಾರದು, ಭವಿಷ್ಯದಲ್ಲಿ ಇಂಥ ದುರ್ಘಟನೆಗಳು ಮರುಳಿಸಬಾರದು ಎಂಬ ಉದ್ದೇಶದಿಂದ ಪ್ರಕರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ವಹಿಸಬೇಕು. ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ತನಿಖೆಯ ನೇತೃತ್ವ ವಹಿಸಬೇಕು. ತಪ್ಪಿತಸ್ಥ ಸರ್ಕಾರಿ ಅಧಿಕಾರಿಗಳು, ಖಾಸಗಿ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಿದ್ದಾರೆ.
ಆರ್‌ಸಿಬಿ ವಿಜಯೋತ್ಸವ ಮತ್ತು ಆಟಗಾರರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಸರ್ಕಾರ ನೀಡಿರುವ ಅನುಮತಿ, ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಲೋಹಿತ್ ಕೋರಲಿದ್ದಾರೆ.