18 ವರ್ಷದ ಬಳಿಕ ಆರ್‌ಸಿಬಿ ತಂಡವು ಐಪಿಎಲ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ರಾಜ್ಯಾದ್ಯಂತ ಅಭಿಮಾನಿಗಳು ನಾನಾ ರೀತಿಗಳಲ್ಲಿ ವಿಜಯೋತ್ಸವ ಆಚರಿಸಿದ್ದು, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ವಿಜಯೋತ್ಸವ ವೇಳೆ ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಮಂಜುನಾಥ್ ಕುಂಬಾರ್ (25) ಹೃದಯಾಘಾತದಿಂದ ಮೃತಪಟ್ಟ ಯುವಕ. ಅಹಮದಾಬಾದ್‌ನಲ್ಲಿ ಐಪಿಎಲ್ ಅಂತಿಮ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಿ ಕಪ್ ತನ್ನದಾಗಿಸಿಕೊಂಡ ಸಂಭ್ರಮ ಮುಗಿಲು ಮುಟ್ಟಿತ್ತು.
ಇದೇ ಸಂಭ್ರಮದೊಂದಿಗೆ ಅಭಿಮಾನಿಗಳು ವಿಜಯೋತ್ಸವ ಮಾಡುತ್ತ ಮಂಜುನಾಥ್ ಟ್ರ‍್ಯಾಕ್ಟರ್‌ನಲ್ಲಿ ಹಾಡು ಹಾಕಿ ಕುಣಿಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆ ಮಂಜುನಾಥ್ ಅಸು ನೀಗಿದ್ದಾರೆ.